ಕವಾಡಿಗರಹಟ್ಟಿ ಬಡಾವಣೆಗೆ  ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ

ಸಂಜೆವಾಣಿ ವಾರ್ತೆ

ಚಿತ್ರದುರ್ಗ,ಆ.5: ಕಲುಷಿತ ನೀರು ಸೇವಿನೆ ದುರಂತದ ಕವಾಡಿಗರಹಟ್ಟಿ ಬಡಾವಣೆಗೆ  ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಜಿಲ್ಲಾ ಉಸ್ತುವಾರಿ ಡಿ.ಸುಧಾಕರ್ ಭೇಟಿ ನೀಡಿ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡಿದರು.ಕಳೆದ ಜುಲೈ 31 ರಂದು ಚಿತ್ರದುರ್ಗದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಕಲುಷಿತ ನೀರು ಸೇವನೆ ದುರಂತ ಪ್ರಕರಣದಲ್ಲಿ ದಲಿತ ಕಾಲೋನಿಯ 5 ಜನರು ಸಾವನ್ನಪ್ಪಿ, 175 ಜನರು ವಾಂತಿ, ಭೇದಿಯಿಂದ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರು. ಪ್ರಕರಣ ಸಂಬಂಧ ನೀರಿನ ಪರಿಕ್ಷಾ ವರದಿಯಲ್ಲಿ‌ ಯಾವುದೇ ರೀತಿಯ ವಿಷ ಬೇರಿತಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದರೂ ಕೂಡ ಪ್ರಕರಣದಲ್ಲಿ ಸಾವಿನ ಸಂಖ್ಯೆ ದಿನೇ ದಿನೇ ಹೆಚ್ಚಾಗಿ, ಅಸ್ವಸ್ಥರ ಸಂಖ್ಯೆಯೂ‌ ಕೂಡ ಹೆಚ್ವಾಗುತ್ತಿದ್ದ ಕಾರಣ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣ ಬಗ್ಗೆ ಪರಿಶೀಲಿಸಿ ಸೂಕ್ತ ವರದಿ ಸಲ್ಲಿಸಲು ಸೂಚಿಸಿದ್ದರು. ಅದರಂತೆ ಆರೋಗ್ಯ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಇಂದು ಸ್ಥಳಕ್ಕೆ ಆಗಮಿಸಿ ಸಾವಿಗೀಡಾದವರ ಕುಟುಂಬಸ್ಥರನ್ನು ಭೇಟಿ ಮಾಡಿ, ಸಾಂತ್ವಾನ ಹೇಳಿದರು.ಬಡಾವಣೆಯಲ್ಲಿನ ನೀರಿನ‌ ಟ್ಯಾಂಕ್ ಹಾಗೂ ಕೆಲ ಕೇರಿಗಳಿಗೆ ಭೇಟಿ‌ ನೀಡಿ ಅಲ್ಲಿನ ಸ್ವಚ್ಚತೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕವಾಡಿಗರಹಟ್ಟಿಯ ದುರ್ಘಟನೆ ನಮ್ಮೆಲ್ಲರಿಗೂ ನೋವು ತಂದಿದೆ. ಇಂತಹ ಘಟನೆಗಳು ಎಲ್ಲೂ ಕೂಡ ನಡೆಯಬಾರದು. ಸೂಕ್ತವಾಗಿ ಪರೀಶೀಲನೆ ನಡೆಸಿ ತಪ್ಪು ಕಂಡು ಬಂದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳುವಂತೆ  ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ನೀಡಲು ತೀರ್ಮಾನಿಸಿದ್ದು, ಇಂದು ಮೂರು ಕುಟುಂಬಕ್ಕೆ ತಲಾ 10ಲಕ್ಷದ ಚೆಕ್ ವಿತರಣೆ ಮಾಡಲಾಗಿದೆ ಎಂದರು.ಘಟನೆಗೆ ಕಾರಣವೇನೆಂಬುದರ ಬಗ್ಗೆ ಅಧಿಕಾರಿಗಳಿಂದ ಸೂಕ್ತ ವರದಿ ಪಡೆಯಲಾಗುವುದು. ಇಲಾಖೆಯ ಲೋಪದೋಷವಿದ್ದರೆ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ ಅವರು, ಕವಾಡಿಗರಹಟ್ಟಿಯ ಸಮಗ್ರ ಅಭಿವೃದ್ಧಿ ಮಾಡಲು ನಾವು ಸಿದ್ದರಿದ್ದು, ಮುಂದೆ ಏನು ಮಾಡಬೇಕೆಂಬ ಬಗ್ಗೆ ಉಸ್ತುವಾರಿ ಸಚಿವರ ಜೊತೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.ಯಾಕೆ ಆಗಿದೆ ? ಹೇಗೆ ಆಗಿದೆ ?  ಎಂಬುದನ್ನು ವಿಚಾರಣೆ ಮಾಡಲು ಸೂಚಿಸಿದ್ದೇವೆ. ಸ್ಪಷ್ಟ ವರದಿ ಬಂದ ಬಳಿಕ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಯಾರು ಕೂಡ ಊಹಾಪೋಹಗಳ ಮಾಹಿತಿ ರೀತಿ ಮಾತನಾಡಬಾರದು. ನಿಜಾಂಶ ಏನೆಂದು ಪೂರ್ಣ ವರದಿ ಮೂಲಕ ಹೊರ ಬರಲಿದೆ. ನಾನು ಇನ್ನೂ ವರದಿಯನ್ನು ನೋಡಿಲ್ಲ, ಯಾರದ್ದೇ ಲೋಪವಿದ್ದರು ಕ್ರಮ ಕೈಗೊಳ್ಳುತ್ತೇವೆ. ಮುಚ್ವಿಹಾಕುವ ಕೆಲಸ ಎಲ್ಲೂ ಕೂಡ ನಡೆಯುವುದಿಲ್ಲ. ಈಗಾಗಲೇ ಪ್ರಕರಣ ಸಂಬಂಧ ನಗರಸಭೆ ಅಧಿಕಾರಿಗಳು, ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು.ಕಾಲರಾಗೆ ಶೀಘ್ರಗತಿಯಲ್ಲಿ ಚಿಕಿತ್ಸೆ ಪಡೆದರೆ ಅನಾಹುತ ಆಗುವುದಿಲ್ಲ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲು ನಾವು ಬಂದಿದ್ದೇವೆ. ರಾಜ್ಯದಲ್ಲಿ ಈ ರೀತಿ ನಡೆದ ಎಲ್ಲಾ ಪ್ರಕರಣಗಳನ್ನೂ ಗಂಭೀರವಾಗಿ ಪರಿಗಣಿಸಿದ್ದೇವೆ. ಈ ಪ್ರಕರಣದ ಎಲ್ಲಾ ವರದಿಗಳೂ ಬಹಿರಂಗ ಆಗುತ್ತವೆ ಎಂದು ತಿಳಿಸಿದರು.