ಕವನಗಳೇ ಸಾಹಿತ್ಯದ ತಿರುಳು: ಡಾ.ಶಿವಣ್ಣ

ಕೋಲಾರ,ಮಾ.೨೨:ರವಿ ಕಾಣದ್ದನ್ನು ಕವಿ ಕಂಡ ಎಂಬ ನಾಣ್ನುಡಿ ಸತ್ಯ ಆಗ ಆಗಲು ಸಾಹಿತ್ಯದ ರಚನೆ ಆಗಬೇಕು. ಸಾಹಿತ್ಯ ಜನರ ನಾಡಿ ಮಿಡಿತವಾಗಬೇಕು. ಇದಕ್ಕೆ ಕವನಗಳೇ ಸಾಕ್ಷಿ. ಹಾಗಾಗಿ ಕವನಗಳೇ
ಸಾಹಿತ್ಯದ ತಿರುಳು ಆಗಿವೆ ಎಂದು ಸರ್ಕಾರಿ ಮಹಿಳಾ ಕಾಲೇಜಿನ. ಪ್ರಾಧ್ಯಾಪಕರ ಡಾ. ವಿ.ಬಿ ಶಿವಣ್ಣ ಅಭಿಪ್ರಾಯಪಟ್ಟರು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ನಗರದ ಕಾರಂಜಿಕಟ್ಟೆಯಲ್ಲಿ ಏರ್ಪಡಿಸಿದ್ದ ವಿಶ್ವ ಕವನ ದಿನಾಚರಣೆ ಕಾರ್ಯಕ್ರಮದಲ್ಲಿ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತಾನಾಡುತ್ತಿದ್ದರು. ಸಾಹಿತ್ಯ ಹಾಸುಹೊಕ್ಕಾಗಬೇಕು, ಸಾಹಿತ್ಯದ ಸೊಬಗು ಎಲ್ಲರಲ್ಲೂ ಸಾಕ್ಷಿಭೂತವಾಗಬೇಕಾದರೆ ಪ್ರಬುದ್ಧ ಕವನಗಳ ರಚನೆ
ಆಗಬೇಕು. ಸಾಹಿತ್ಯ ಮತ್ತು ಸಂಸ್ಕೃತಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಸಮಾಜದ ತಿದ್ದುವ ಸಮಾಜ ಮೆಚ್ಚುವ ಕವನಗಳಿಂದ
ಸಮಾಜದ ಸರ್ವತೋಮುಖ ಪ್ರಗತಿ ಸಾಧ್ಯ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಜೆ.ಜಿ ನಾಗರಾಜ ಮಾತಾನಾಡಿ ಡಿವಿಜಿ ರವರ ಮಂಕುತಿಮ್ಮನ ಕಗ್ಗ,
ಸರ್ವಜ್ಞನ ತ್ರಿಪದಿಗಳು ಸೇರಿದಂತೆ ಅನೇಕ ಕವನಗಳು ಸಮಾಜದ ಬೆಳವಣಿಗೆಗೆ ಪೂರಕವಾಗಿವೆ. ಇದೇ ನಿಟ್ಟಿನಲ್ಲಿ ಕವನ ರಚಿಸುವ , ಅಧ್ಯಯನ ಮಾಡುವ ಯುವ ಕವಿಗಳಿಗೆ ಗೌರವಿಸುವ ಮತ್ತು ಕಾರ್ಯಗಾರಗಳ ಮೂಲಕ ಸಾಹಿತ್ಯ ಸಂಸ್ಕೃತಿ ಬೆಳೆಸಲು ಎಲ್ಲರೂ ಸಹಕರಿಸಬೇಕು ಎಂದರು. ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಸಂಘದ ಅದ್ಯಕ್ಷ ಶ್ರೀನಿವಾಸ ಮಾತಾನಾಡಿ, ವಿದ್ಯಾರ್ಥಿ ದೆಸೆಯಿಂದಲೇ ಕವನ ರಚಿಸುವ ಮತ್ತು
ರಚಿಸಲು ಮಾಡುವ ಕೃಷಿಯ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ನಿರಂತರ ಕವನ ರಚನಾ ಕಮ್ಮಟಗಳು ನಡೆಸಲು ಕನ್ನಡ ಶಿಕ್ಷಕರು ಮುಂದಾಗಬೇಕೆಂದರು.ಅಧ್ಯಕ್ಷತೆ ವಹಿಸಿದ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಿ. ನಾರಾಯಣಪ್ಪ ಮಾತಾನಾಡಿ ಇಂದಿನ
ಯುವಜನಾಂಗದಲ್ಲಿ ಸಾಹಿತ್ಯದ ಪ್ರಾಕಾರಗಳು ಮತ್ತು ಕವನಗಳ ರಚನೆ ಅದರ ಹಾಡುಗಾರಿಕೆ ಮತ್ತು ಬರಹಗಳು ಕಾಣೆಯಾಗುತ್ತಿವೆ. ಇದಕ್ಕಾಗಿ
ವಿಶ್ವವಿದ್ಯಾಲಯಗಳು ಮತ್ತು ಸಂಘ ಸಂಸ್ಥೆಗಳು ಎಚ್ಚೆತ್ತು ಕೊಂಡು ಪಠ್ಯ ಕ್ರಮ ಮತ್ತು ಗದ್ಯ ಮತ್ತು ಪಂದ್ಯಗಳಲ್ಲಿ ಹೆಚ್ಚು ಕವನಗಳನ್ನು ಪ್ರಚುರ ಪಡಿಸುವ ಅಗತ್ಯವಿದೆ ಎಂದರು. ವೇದಿಕೆಯಲ್ಲಿ ಜಿಲ್ಲಾ ಚುಸಾಪ ಕಾರ್ಯದರ್ಶಿ ಡಾ. ಶರಣಪ್ಪ ಗಬ್ಬೂರ್, ಉಪಾಧ್ಯಕ್ಷ ಟಿ ಸುಬ್ಬರಾಮಯ್ಯ ಮಾತಾನಾಡಿದ ಕಾರ್ಯಕ್ರಮ ದಲ್ಲಿ ಆಂಜನೇಯ, ಪ್ರಕಾಶ್, ವೆಂಕಟೇಶ್, ರವಿಚಂದ್ರ, ರಾಮಾಂಜಿನೇಯ, ಪ್ರತಿಭಾ, ಸ್ವರೂಪ, ಕುಸುಮ, ಉಪಸ್ಥಿತರಿದ್ದು ಕವನ ವಾಚಿಸಿದರು.