ಕವನಗಳಲ್ಲಿ ನೈಜತೆ ಇರಲಿ: ಚಂದ್ರಕಾಂತ ಬಿರಾದಾರ

ಭಾಲ್ಕಿ:ಮೇ.26: ಕವಿಗಳು ಪ್ರಚಲಿತ ವಿದ್ಯಮಾನಕ್ಕೆ ಹೆಚ್ಚಿನ ಮಹತ್ವ ಕೊಡಬೇಕು. ಬರೆಯುವ ಕವನಗಳಲ್ಲಿ ನೈಜತೆ ಇರಬೇಕು ಎಂದು ಪ್ರಾಚಾರ್ಯ ಪ್ರೊ| ಚಂದ್ರಕಾಂತ ಬಿರಾದಾರ ಹೇಳಿದರು.

ಪಟ್ಟಣದ ಚನ್ನಬಸವಾಶ್ರಮದಲ್ಲಿ ಗುರುವಾರ ನಡೆದ ಚುಟುಕು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚುಟುಕು ಸಾಹಿತ್ಯ ಸ್ವಲ್ಪವೇ ವಿಷಯಗಳಲ್ಲಿ ಸಂಪೂರ್ಣ ಅರ್ಥಕೊಡುವ ಸಾಹಿತ್ಯವಾಗಿದೆ. ಕವಿಗಳು ಪ್ರಚಿಲಿತ ವಿದ್ಯಮಾನಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ಸಾಹಿತ್ಯ ರಚಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಮುಖ್ಯ ಶಿಕ್ಷಕ ಜಯರಾಜ ದಾಬಶೆಟ್ಟಿ, ಸಾಣೆಹಳ್ಳಿ ಶಿವಸಂಚಾರ ಶ್ರೀಗಳು ಕಾಲ, ಕಾಯಕ, ಕಾಸಿಗೆ ಮಹತ್ವನೀಡಿ, ಸಮಾಜದಲ್ಲಿ ಉತ್ತಮ ಸಂಸ್ಕಾರ ಬೆಳೆಸಲು ದೃಶ್ಯ ಮಾಧ್ಯಮ ಬಳಸಿಕೊಳ್ಳುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಹೇಳಿದರು. ಉತ್ತರ ಕನ್ನಡದ ಸಾಹಿತಿ ಕೃಷ್ಣಾ ಪದಕಿ ಸದಾಶಯ ನುಡಿ ನುಡಿದರು. ಕಾರ್ಯಕ್ರಮದಲ್ಲಿ ಕವಿಗಳಾದ ಮಾಣಿಕ ನೇಳಗಿ, ಬೀದರಿನ ಮಾನಶೆಟ್ಟಿ ಬೆಳಕೇರಿ, ಓಂಕಾರ ಉಪ್ಪೆ, ಡಾ| ಕಾಶಿನಾಥ ಚಲವಾ, ಗಣಪತಿ ಭೂರೆ, ವೀರಣ್ಣ ಕುಂಬಾರ, ಶೇಖರಗೌಡ ಪಾಟೀಲ, ಮೃತ್ಯುಂಜಯ ಮಟ್ಟಿ, ಜೆ.ಡಿ.ಘೋರ್ಪಡೆ, ಮಾಯಣ್ಣ ಕರಂಗೂರ, ಹಣಮಂತರಾವ ಘಂಟೆಕರ, ಬೆಂಗಳೂರಿನ ಶ್ರೀಕಾಂತ, ಜಗದೀಶ ಸಾಲಳ್ಳಿ, ವಿರೂಪಾಕ್ಷ ಲಮಾಣಿ, ಮಂಜುಳಾ ನಾಮದೇವ, ವಂದನಾ ಕರಾಳೆ, ಡಾ| ಪಲ್ಲವಿ ಪಾಟೀಲ, ಮಾಹಾದೇವಿ ಗೋಖಲೆ, ಎಸ್.ಎಸ್.ಕಲ್ಯಾಣರಾವ ವಿವಿಧ ಕವನ ಮತ್ತು ಕವಿತೆಗಳು ವಾಚಿಸಿದರು.

ವಿಶ್ವನಾಥ ಮುಕ್ತಾ ಸ್ವಾಗತಿಸಿದರು. ಸವಿತಾ ಭೂರೆ ನಿರೂಪಿಸಿದರು. ಸಂಗಮೇಶ್ವರ ಮುರ್ಕೆ ವಂದಿಸಿದರು.