
ಬೆಂಗಳೂರು,ಆ.೮-ಕಳ್ಳಿ ಕಳ್ಳಿ ಎಂದು ಸಂಬಂಧಿಕರು, ಪರಿಚಯಸ್ಥರು ವ್ಯಂಗ್ಯ ಮಾಡಿದ್ದರಿಂದ ಬೇಸತ್ತ ಪತಿಯೊಬ್ಬ ಆಕ್ರೋಶಗೊಂಡು ತನ್ನ ಪತ್ನಿಯನ್ನೇ ಬರ್ಬರವಾಗಿ ಕೊಲೆ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ದುರ್ಘಟನೆ ವೈಟ್ ಫೀಲ್ಡ್ ನ ಕುಂದಲಹಳ್ಳಿಯಲ್ಲಿ ನಡೆದಿದೆ.
ಕುಂದಲಹಳ್ಳಿಯ ಆದರ್ಶ ಮೊಬೈಲ್ ರಸ್ತೆಯ ಸರಿತಾ (೩೫) ಕೊಲೆಯಾದವರು, ಕೃತ್ಯ ನಡೆಸಿ ಆತ್ಮಹತ್ಯೆಗೆ ಯತ್ನಿಸಿ ಧೈರ್ಯ ಸಾಲದೇ ಠಾಣೆಗೆ ಬಂದು ಶರಣಾದ ಪತಿ ತಾರಾನಾಥ್(೩೭)ನನ್ನು ವೈಟ್ ಫೀಲ್ಡ್ ಪೊಲೀಸರು ಬಂಧಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ ಎಂದು ಡಿಸಿಪಿ ಎಸ್. ಗಿರೀಶ್ ತಿಳಿಸಿದ್ದಾರೆ.
ಮಂಗಳೂರಿನ ಮೂಲ್ಕಿಯಲ್ಲಿ ವಾಸವಿದ್ದಾಗ ಸರಿತಾ ಮೇಲೆ ಕಳ್ಳತನ ಆರೋಪ ಕೇಳಿಬಂದು ಆಕೆಯನ್ನು ಕಳ್ಳಿ, ಕಳ್ಳಿ ಎಂದು ಹೀಯಾಳಿಸುತ್ತಿದ್ದರಿಂದ ಆಕೆಯನ್ನು ಮೂಲ್ಕಿಯಿಂದ ವೈಟ್ ಫೀಲ್ಡ್ ಗೆ ಕರೆತಂದು ವಾಸವಿದ್ದ ಪತಿ, ಇದ್ದಕ್ಕಿದ್ದಂತೆ ಪತ್ನಿಯನ್ನು ಕೊಲೆ ಮಾಡಿ ಜೈಲು ಸೇರಿದ್ದಾನೆ.
ವೈಟ್ ಫೀಲ್ಡ್ ನ ಕುಂದಲಹಳ್ಳಿಯಲ್ಲಿ ದಂಪತಿಯು ಪಾನಿಪೂರಿ ಮಾರಾಟ ಮಾಡುತ್ತಾ ಜೀವನ ಕಟ್ಟಿಕೊಂಡಿದ್ದರು. ಇನ್ನು ಪ್ರತಿನಿತ್ಯ ಕೆಲಸದಲ್ಲಿ ಇಬ್ಬರೂ ಪಾಲ್ಗೊಳ್ಳುತ್ತಿದ್ದರು. ಹೀಗಾಗಿ, ಆರಂಭದಲ್ಲಿ ದಂಪತಿ ಚೆನ್ನಾಗಿಯೇ ಜೀವನ ಮಾಡುತ್ತಿದ್ದರು.
ಆದರೆ, ತನ್ನ ಪತ್ನಿ ಕಳ್ಳಿ ಎನ್ನುವ ವಿಚಾರ ಬೆಂಗಳೂರಿಗೆ ಬಂದರೂ ಬೆಂಬಿಡದ ಹಿನ್ನೆಲೆಯಲ್ಲಿ ಕುಟುಂಬ ಸಮೇತ ಪತಿ ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನ ಮಾಡಿದ್ದಾನೆ.
ಅದರಂತೆ ನಿನ್ನೆ ರಾತ್ರಿ ತಾರಾನಾಥ್ ತನ್ನ ಪತ್ನಿ ಮಲಗಿರುವಾಗ ಕುತ್ತಿಗೆಗೆ ಹಗ್ಗವನ್ನು ಬಿಗಿದು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದನು. ಆದರೆ, ಆತ್ಮಹತ್ಯೆ ಮಾಡಿಕೊಳ್ಳಲು ಧೈರ್ಯ ಸಾಲದೇ ಸೀದಾ ಪೊಲೀಸ್ ಠಾಣೆಗೆ ಹೋಗಿದ್ದಾನೆ. ಅಲ್ಲಿ ಪೊಲೀಸರಿಗೆ ತನ್ನ ಪತ್ನಿಯನ್ನು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡು ಬಂಧಿಸುವಂತೆ ಶರಣಾಗಿದ್ದಾರೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನೊಂದಿಗೆ ತೆರಳಿ ಸ್ಥಳ ಮಹಜರ್ ಮಾಡಿದ್ದು ಪ್ರಾಥಮಿಕ ತನಿಖೆಯಲ್ಲಿ ಕೊಲೆ ಸಾಬೀತಾಗಿದ್ದು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.