ಕಳ್ಳಿಯರನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ದಂಪತಿ !

ಕಲಬುರಗಿ,ಅ.1-ಮನೆಯ ಮುಖ್ಯದ್ವಾರದ ಬಾಗಿಲಿನ ಮೇಲೆ ಕಟ್ಟಿಗೆಯಿಂದ ಮಾಡಿದ ವೆಂಕಟೇಶ್ವರ ವಿಗ್ರಹಕ್ಕೆ ಹಾಕಿದ್ದ 11 ಸಾವಿರ ರೂ.ಮೌಲ್ಯದ 2 ಗ್ರಾಂ.ಬಂಗಾರದ ಸರ ಕಳವು ಮಾಡಿಕೊಂಡು ಓಡಿ ಹೋಗುತ್ತಿದ್ದ ಇಬ್ಬರು ಕಳ್ಳಿಯರನ್ನು ದಂಪತಿ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಜಯನಗರದ ಶಿವರಾಜ ಬೋಮಣ್ಣ ಮತ್ತು ಶೈಲಜಾ ಬೋಮಣ್ಣ ದಂಪತಿಯೇ ಚಿನ್ನದ ಸರ ಕಳವು ಮಾಡಿಕೊಂಡು ಓಡಿ ಹೋಗುತ್ತಿದ್ದ ಕಳ್ಳಿಯರನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸುವುದರ ಮೂಲಕ ಸಾಹಸ ಮೆರೆದಿದ್ದಾರೆ.
ಜಯನಗರದ ಶಿವರಾಜ ಬೋಮಣ್ಣ ಅವರು ಮನೆಯಲ್ಲಿ ಹಾಲಿನಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದಾಗ ಮನೆಯ ಹೊರಗಡೆಯ ಮುಖ್ಯದ್ವಾರದ ಬಳಿ ಸಪ್ಪಳವಾದಂತಾಗಿದ್ದರಿಂದ ಹೊರಗೆ ಬಂದು ನೋಡಿದ್ದಾರೆ. ಆಗ ಕಳ್ಳಿಯರು ಮನೆಯ ಕಂಪೌಂಡ್ ಮೇನ್ ಗೇಟ್ ಹಾರಿ ಓಡಿ ಹೋಗಲು ಯತ್ನಿಸಿದ್ದಾರೆ. ಈ ವೇಳೆ ಶಿವರಾಜ ಅವರು ಮನೆಯ ಮುಖ್ಯದ್ವಾರದ ಬಾಗಿಲಿನ ಮೇಲೆ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಅವರ ತಂದೆ ವಿಜಯಕುಮಾರ ಬೋಮಣ್ಣ ಅವರು ವೆಂಕಟೇಶ್ವರ ವಿಗ್ರಹಕ್ಕೆ ಹಾಕಿದ್ದ 11 ಸಾವಿರ ರೂ.ಮೌಲ್ಯದ 2 ಗ್ರಾಂ.ಚಿನ್ನದ ಸರ ಕಾಣದೆ ಗಾಬರಿಯಾಗಿ ಪತ್ನಿಗೆ ಕರೆದು ಕಳ್ಳಿಯರನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಭರತ ನಗರ ತಾಂಡಾದ ಮೀನಾಬಾಯಿ ಗಂಡ ಕೇಸು ಚವ್ಹಾಣ್ ಮತ್ತು ಬಾಪುನಗರದ ಪೂರ್ಣಿಮಾ ತಂದೆ ದೇವಿದಾಸ ಉಪಾಧ್ಯಾಯ ಎಂಬುವವರನ್ನು ಹಿಡಿದು ಮಾಲು ಪೊಲೀಸರಿಗೆ ಒಪ್ಪಿಸಲಾಗಿದೆ. ಈ ಸಂಬಂಧ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.