ಕಳ್ಳಭಟ್ಟಿ ಸಾರಾಯಿ ಅಡ್ಡೆಗೆ ಅಬಕಾರಿ ದಾಳಿ ಆರೋಪಿ ಸೆರೆ

ಪುತ್ತೂರು, ಎ.೨೪- ಪುತ್ತೂರು ತಾಲೂಕಿನ ಪುಣ್ಚಪ್ಪಾಡಿ ಎಂಬಲ್ಲಿ ಕಳ್ಳಭಟ್ಟಿ ಸಾರಾಯಿ ಅಡ್ಡೆಯನ್ನು ಪತ್ತೆ ಮಾಡಿರುವ ಅಬಕಾರಿ ಪೊಲೀಸರು ಈ ಸಂಬಂಧ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಸವಣೂರು ಗ್ರಾಮದ ಪುಣ್ಚಪ್ಪಾಡಿ ಎಂಬಲ್ಲಿ ಶುಕ್ರವಾರ ಮುಂಜಾನೆ ದಾಳಿ ನಡೆಸಿದ ಅಬಕಾರಿ ಪೊಲೀಸರು ಆರೋಪಿ ಧರ್ಮಪ್ರಕಾಶ್ ರೈ ಎಂಬಾತನನ್ನು ಬಂಧಿಸಿದ್ದು, ೯೦೦ ಲೀಟರ್ ಗೇರುಹಣ್ಣಿನ ಹುಳಿರಸ ಹಾಗೂ ಒಂದು ಲೀಟರ್ ಕಳ್ಳಭಟ್ಟಿ ಸಾರಾಯಿ ವಶಪಡಿಸಿಕೊಂಡಿದ್ದಾರೆ. ಆರೋಪಿಯ ಮನೆಯ ಶೆಡ್ ನಲ್ಲಿ ಈ ಕಳ್ಳಭಟ್ಟಿ ಸಾರಾಯಿ ಅಡ್ಡೆಯನ್ನು ನಡೆಸಲಾಗುತ್ತಿದ್ದು, ಪುತ್ತೂರು ಅಬಕಾರಿ ಉಪನಿರೀಕ್ಷಕ ಅಂಗಾರ ಪಿ, ವಲಯ ನಿರೀಕ್ಷಕ ಸುಬ್ರಹ್ಮಣ್ಯ ಪೈ, ಸಿಬಂದಿಗಳಾದ ಪ್ರಶಾಂತ್ ಕಾಂಬ್ಲೆ, ಗಯಾಝ್ ಪಾಶಾ, ವಿಜಯಕುಮಾರ್ ಹಾಗೂ ಎಲ್ಲಪ್ಪ ಬಿ ಕಂಡೆಕರ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದೆ.