ಕಳ್ಳತನವಾಗಿದ್ದ 3 ಮೊಬೈಲ್ 24 ಗಂಟೆಯೊಳಗಡೆ ಪತ್ತೆ

ಕಲಬುರಗಿ,ಮೇ.20-ಕಳ್ಳತನವಾಗಿದ್ದ 3 ಮೊಬೈಲ್‍ಗಳನ್ನು 24 ಗಂಟೆಯೊಳಗಡೆ ಪತ್ತೆ ಹಚ್ಚುವಲ್ಲಿ ಇಲ್ಲಿನ ರೋಜಾ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಸಂಬಂಧ ಹೈದ್ರಾಬಾದನ ಚಂದ್ರಯಾನ ಗುಡಾದ ಮಹ್ಮದ್ ಹಸನ್ (23) ಮತ್ತು ಮಹ್ಮದ್ ನಾಸಿಕ್ (22) ಎಂಬುವವರನ್ನು ಬಂಧಿಸಿ 50 ಸಾವಿರ ರೂ.ಮೌಲ್ಯದ ಲ್ಯಾಪ್‍ಟಾಪ್ ಮತ್ತು 1 ಲಕ್ಷ ರೂ.ಮೌಲ್ಯದ 7 ಮೊಬೈಲ್ ಸೇರಿ 1.50 ಲಕ್ಷ ರೂ.ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿಯ ಮಹ್ಮದ್ ಅಸ್ಲಂ ಅವರು ಕುಟುಂಬದೊಂದಿಗೆ ಇಲ್ಲಿನ ಹಜರತ್ ಖ್ವಾಜಾ ಬಂದೇನವಾಜ್ ದರ್ಗಾ ವೀಕ್ಷಿಸಲು ಆಗಮಿಸಿ ದರ್ಗಾ ಸಮೀಪದ ಲಾಡ್ಜ್ ಒಂದರಲ್ಲಿ ಉಳಿದುಕೊಂಡಿದ್ದರು. ಮೇ.19 ರಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಕುಟುಂಬದ ಸದಸ್ಯರೊಂದಿಗೆ ಪ್ರಾರ್ಥನೆ ಮಾಡಲು ದರ್ಗಾಕ್ಕೆ ತೆರಳಿದ್ದಾಗ 3 ಮೊಬೈಲ್ ಕಳವಾಗಿದ್ದವು. ಅವರು ಈ ಸಂಬಂಧ ರೋಜಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಅನ್ವಯ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್, ಕಲಬುರಗಿ ಉತ್ತರ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಜಿ.ಚಂದ್ರಶೇಖರ್ ಅವರ ಮಾರ್ಗದರ್ಶನದಲ್ಲಿ ರೋಜಾ ಪೊಲೀಸ್ ಠಾಣೆ ಪಿಐ ಎನ್.ಡಿ.ಸನದಿ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಮಹ್ಮದ್ ರಫಿಯುದ್ದೀನ್, ಮಲ್ಲಪ್ಪ ಅವರನ್ನೊಳಗೊಂಡ ತಂಡ ತನಿಖೆ ನಡೆಸಿ ಸಿಸಿಟಿವಿ ಫುಟೇಜ್ ಆಧರಿಸಿ ಹೈದ್ರಾಬಾದನ ಚಂದ್ರಯಾನ ಗುಡಾದ ಮಹ್ಮದ್ ಹಸನ್ ಹಾಗೂ ಮಹ್ಮದ್ ನಾಸಿಕ್ ಅವರನ್ನು ಬಂಧಿಸಿ ಕಳವಾದ ಮೊಬೈಲ್‍ಗಳನ್ನು 24 ಗಂಟೆಯೊಳಗಡೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕಳವಾದ ಮೊಬೈಲ್‍ಗಳನ್ನು 24 ಗಂಟೆಯೊಳಗಡೆ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯುಕ್ತ ಚೇತನ್ ಆರ್.ಅವರು ಶ್ಲಾಘಿಸಿದ್ದಾರೆ.