ಕಳ್ಳತನವಾಗಿದ್ದ 1.29 ಕೋಟಿ ರೂ.ಮೌಲ್ಯದ ವಸ್ತು ವಶಪಡಿಸಿಕೊಂಡು ವಾರುಸುದಾರರಿಗೆ ಹಸ್ತಾಂತರ

ಕಲಬುರಗಿ,ನ.13-ಕಳೆದ 2020ನೇ ಸಾಲಿನ ಅಕ್ಟೋಬರ್ ತಿಂಗಳಿಂದ 2021ನೇ ಸಾಲಿನ ಅಕ್ಟೋಬರ್ ವರೆಗೆ ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ನಡೆದ 271 ಕಳ್ಳತನ ಪ್ರಕರಣಗಳ ಪೈಕಿ 125 ಪ್ರಕರಣಗಳನ್ನು ಪತ್ತೆ ಹಚ್ಚಿ 1, 29, 39, 553 ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಅವುಗಳನ್ನು ಅವುಗಳ ವಾರಸುದಾರರಿಗೆ ಒಪ್ಪಿಸಲಾಗಿದೆ ಎಂದು ಡಿಸಿಪಿ ಆಡೂರು ಶ್ರೀನಿವಾಸಲು ತಿಳಿಸಿದರು.
ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಇಂದು ಅವರು, ಕಳ್ಳತನವಾಗಿದ್ದ ವಸ್ತುಗಳನ್ನು ಅವುಗಳ ವಾರಸುದಾರರಿಗೆ ಹಸ್ತಾಂತರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ವಿಷಯ ತಿಳಿಸಿದರು.
2020ನೇ ಸಾಲಿನ ಅಕ್ಟೋಬರ್ ತಿಂಗಳಿಂದ 2021ನೇ ಸಾಲಿನ ಅಕ್ಟೋಬರ್ ವರೆಗೆ ನಗರ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಒಟ್ಟು 271 ಕಳ್ಳತನ ಪ್ರಕರಣ ನಡೆದಿದ್ದವು. 4,700 ಗ್ರಾಂ.ಬಂಗಾರ, 20 ಕೆ.ಜಿ.ಬೆಳ್ಳಿ, 67,35,634 ರೂ.ನಗದು, 146 ವಾಹನಗಳು, ಬ್ಯಾಟರಿ, ಮೊಬೈಲ್, ಲ್ಯಾಪ್ ಟಾಪ್ ಹಾಗೂ ಇತರೆ ವಸ್ತುಗಳು ಸೇರಿ 3,67,92,684 ರೂ.ಬೆಲೆ ಬಾಳುವ ಬಂಗಾರ, ಬೆಳ್ಳಿ, ನಗದು ಹಣ, ವಾಹನಗಳು ಮತ್ತು ಇತರೆ ವಸ್ತುಗಳು ಕಳವಾಗಿದ್ದವು.
ನಗರ ಪೊಲೀಸ್ ಆಯುಕ್ತರಾದ ಡಾ.ವೈ.ಎಸ್.ರವಿಕುಮಾರ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಸಿ ದಾಖಲಾದ 271 ಪ್ರಕರಣಗಳ ಪೈಕಿ 125 ಪ್ರಕರಣಗಳನ್ನು ಪತ್ತೆ ಹಚ್ಚಿ 1359 ಗ್ರಾಂ.ಬಂಗಾರ, 37 ತೊಲಿ ಬೆಳ್ಳಿ, 5,21,700 ರೂ.ನಗದು, 111 ವಾಹನ, ಬ್ಯಾಟರಿ, ಮೊಬೈಲ್, ಲ್ಯಾಪ್ ಟಾಪ್ ಹಾಗೂ ಇತರೆ ವಸ್ತುಗಳು ಸೇರಿ 1,29,39,553 ರೂ.ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಅವುಗಳ ವಾರುಸುದಾರರಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಪೊಲೀಸ್ ಆಯುಕ್ತಾಲಯದ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.