ಕಳೆದ ಮೂರು ವರ್ಷದಲ್ಲಿ 130ಕ್ಕೂ ಅಧಿಕ ದ್ವೇಷದ ಸುದ್ದಿ ವರದಿ: ಕಿರಣ್ ರಿಜಿಜು

ನವದೆಹಲಿ,ಆ.6-ದೇಶದಲ್ಲಿ ಕಳೆದ ಲೋಕಸಭೆ ಮತ್ತು ಈ ವರ್ಷದ ಆರಂಭದಲ್ಲಿ ನಡೆದ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಸಮಯದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಒಟ್ಟು 130ಕ್ಕೂ ಅಧಿಕ “ದ್ವೇಷದ ಸುದ್ದಿ” ಪ್ರಕರಣ ವರದಿಯಾಗಿವೆ ಎಂದು ಕಾನೂನು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.2019ರ ಲೋಕಸಭೆ ಚುನಾವಣೆಯಲ್ಲಿ 58 ಪ್ರಕರಣಗಳು ವರದಿಯಾಗಿದ್ದವು. 2019 ರಲ್ಲಿ ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯ ಸಮಯದಲ್ಲಿ ತಲಾ ಒಂದು ಪ್ರಕರಣ ಮಾತ್ರ ವರದಿಯಾಗಿದೆ ಎಂದು ಹೇಳಿದ್ದಾರೆ.ಈ ಕುರಿತು ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿರುವ ಅವರು, 2019 ರ ಜಾರ್ಖಂಡ್ ವಿಧಾನಸಭಾ ಚುನಾವಣೆ ಮತ್ತು 2020 ರಲ್ಲಿ ಬಿಹಾರ ಚುನಾವಣೆಯ ಸಂದರ್ಭದಲ್ಲಿ ಯಾವುದೇ ದೂರು ಬಂದಿಲ್ಲ ಎಂದಿದ್ದಾರೆ.ಕಳೆದ ವರ್ಷ ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ 29 “ದ್ವೇಷ ಸುದ್ದಿ” ಪ್ರಕರಣಗಳು ವರದಿಯಾಗಿವೆ ಎಂದು ಹೇಳಿದ್ದಾರೆ.ಈ ವರ್ಷದ ಆರಂಭದಲ್ಲಿ ನಡೆದ ಗೋವಾ, ಮಣಿಪುರ, ಪಂಜಾಬ್, ಉತ್ತರಾಖಂಡ ಮತ್ತು ಯುಪಿಯಲ್ಲಿ ಇತ್ತೀಚಿನ ಸುತ್ತಿನ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಇಂತಹ ಪ್ರಕರಣಗಳ ಸಂಖ್ಯೆ ಎಂಟು ವರದಿಯಾಗಿವೆ ಎಂದು ಹೇಳಿದ್ದಾರೆ.ಕಳೆದ ಐದು ವರ್ಷಗಳಲ್ಲಿ ಚುನಾವಣಾ ಸಮಯದಲ್ಲಿ ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳಿಂದ ಯಾವುದೇ ದೂರುಗಳು ಬಂದಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ ಎಂದು ಹೇಳಿದ್ದಾರೆ.