ಕಳಸಾ ಬಂಡೂರಿ ಯೋಜನೆ ಬಿಜೆಪಿ ಯಿಂದ ಮಾತ್ರ ಸಾಧ್ಯ : ಬೊಮ್ಮಾಯಿ

ನರಗುಂದ,ಮಾ12: ಕಳಸಾ ಬಂಡೂರಿ ಯೋಜನೆ ಬಗ್ಗೆ ಮಾತನಾಡುವ ಹಕ್ಕು ಕಾಂಗ್ರೆಸ್ಸಿಗೆ ಇಲ್ಲ. ಈ ಯೋಜನೆಯ ಅನುಷ್ಠಾನ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನರಗುಂದದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, 2003 ರಲ್ಲಿಯೇ ಕಳಸಾ ಬಂಡೂರಿ ಯೋಜನೆಗಾಗಿ ತಾವು ಹಾಗೂ ಸಿ. ಸಿ. ಪಾಟೀಲ 254 ಕಿಲೋಮೀಟರ್ ಪಾದಯಾತ್ರೆ ಮಾಡಿದ್ದೆವು. ಈ ಯೋಜನೆಗಾಗಿ ಹೋರಾಟ ಮಾಡುತ್ತ ಬಂದಿದ್ದೇವೆ ಎಂದರು.
ಈ ಹಿಂದೆ ನವಲಗುಂದದಲ್ಲಿ ಕಳಸಾ ಬಂಡೂರಿಗಾಗಿ ಹೋರಾಟ ಮಾಡುತ್ತಿದ್ದ ರೈತರನ್ನು ಪೆÇಲೀಸರಿಂದ ಹೊಡಿಸಿದ ಕಾಂಗ್ರೆಸ್ ಪಕ್ಷಕ್ಕೆ ಕಳಸಾ ಬಂಡೂರಿ ಯೋಜನೆ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಎಂದರು.
ರೈತ ಸಮ್ಮಾನ ಯೋಜನೆಯಡಿ ರಾಜ್ಯದ ರೈತರಿಗೆ 10 ಸಾವಿರ ರೂಪಾಯಿ, ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮಗಳಿಗೆ ಕುಡಿಯುವ ನೀರು ಕೊಟ್ಟಿದ್ದೇವೆ. ಹಗಲಿರುಳು ಕಷ್ಟಪಟ್ಟು ದುಡಿಯುವ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ, ಮಹಿಳಾ ಕಾರ್ಮಿಕರಿಗೆ ಪ್ರತಿ ತಿಂಗಳು 1000 ರೂಪಾಯಿ, 180 ಕೋಟಿ ರೂಪಾಯಿ ವೆಚ್ಚದಲ್ಲಿ ರೈತರಿಗೆ ಜೀವವಿಮೆ ಸಹಜವಾಗಿ ರೈತ ಮರಣ ಹೊಂದಿದರೂ ಸಹ 2 ಲಕ್ಷ ರೂ ಜೀವ ವಿಮೆ ಮೂಲಕ ಅನ್ನದಾತನಿಗೆ 2 ಲಕ್ಷ ಸಿಗುವ ಯೋಜನೆ ಇದಾಗಿದೆ ಎಂದು ಹೇಳಿದರು.
ರಾಜ್ಯದ 30 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಹಾಗೂ ಪಿ.ಯು.ಸಿ ಯಿಂದ ಡಿಗ್ರಿವರೆಗೆ ಉಚಿತ ಶಿಕ್ಷಣ ನೀಡುವ ಯೋಜನೆ ನಮ್ಮ ಸರಕಾರದ ಸಾಧನೆಯಾಗಿದೆ ಎಂದು ಹೇಳಿದರು.
ಇವೆಲ್ಲ ಸಾಧನೆಗಳನ್ನು ಇಟ್ಟುಕೊಂಡು ನಿಮ್ಮ ಮುಂದೆ ಮತ ಕೇಳಲು ಬರುತ್ತೇವೆ. ನರಗುಂದ ಮತಕ್ಷೇತ್ರಕ್ಕೆ 2000 ಕೋಟಿ ಅನುದಾನ ತಂದು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ ಸಿ. ಸಿ. ಪಾಟೀಲರನ್ನು ಬರುವ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಿಂದ ಆರಿಸಿ ತರುವಂತೆ ಜನತೆಗೆ ಬೊಮ್ಮಾಯಿ ಕರೆ ನೀಡಿದರು.
ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಮಾತನಾಡಿ ನರಗುಂದದಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಲೋಕೋಪಯೋಗಿ ಸಚಿವರ ಕ್ಷೇತ್ರದಲ್ಲಿ ರಸ್ತೆಗಳು ಸರಿ ಇಲ್ಲ ಎಂದು ಟೀಕಿಸಿರುವ ಸಿದ್ಧಾರಾಮಯ್ಯನವರು ಅಂದು ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ನನ್ನ ಕೆಲಸಗಳನ್ನು ಹೊಗಳಿದ್ದಿರೋ ಇಲ್ಲೋ ಚಾಮುಂಡಿ ಮೇಲೆ ಆಣೆ ಮಾಡಿ ಹೇಳಿ ಎಂದು ಸವಾಲೆಸೆದರು.
ಬೃಹತ್ ನೀರಾವರಿ ಸಚಿವ ಗೋವಿಂದ ಕಾರಜೋಳ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ, ರಮೇಶ ಜಾರಕಿಹೊಳಿ ಮಾತನಾಡಿದರು.
ವೇದಿಕೆ ಮೇಲೆ ಕಳಕಪ್ಪ ಬಂಡಿ, ರಾಮಣ್ಣ ಲಮಾಣಿ, ಅನಿಲ್ ಮೆಣಸಿನಕಾಯಿ, ಮಹೇಶ ಕುಮಠಳ್ಳಿ, ಮುತ್ತಣ್ಣ ಲಿಂಗನಗೌಡ್ರ ಮತ್ತಿತರರು ಉಪಸ್ಥಿತರಿದ್ದರು.