ಕಳವಾದ 47 ಮೊಬೈಲ್ ಪತ್ತೆ ಮಾಡಿ ವಾರುಸುದಾರರಿಗೆ ಹಸ್ತಾಂತರ

ಕಲಬುರಗಿ,ಜೂ.10-ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳವಾದ, ಮರೆತು ಹೋದ, ಕಾಣೆಯಾದ ವಿವಿಧ ಕಂಪನಿಯ ಸುಮಾರು 15 ಲಕ್ಷ ರೂ.ಮೊತ್ತದ 47 ಮೊಬೈಲ್‍ಗಳನ್ನು ಅವುಗಳ ವಾರಸುದಾರರಿಗೆ ಇಂದು ಹಸ್ತಾಂತರಿಸಲಾಯಿತು.
ನಗರದ ಎಸ್.ಪಿ.ಕಚೇರಿಯಲ್ಲಿ ಎಸ್.ಪಿ.ಅಕ್ಷಯ್ ಹಾಕೆ ಅವರು 47 ಮೊಬೈಲ್‍ಗಳನ್ನು ಅವುಗಳ ವಾರಸುದಾರರಿಗೆ ಹಸ್ತಾಂತರಿಸಿದರು.
ಈ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ದೂರ ಸಂಪರ್ಕ ಇಲಾಖೆ ಜಾರಿಗೆ ತಂದಿರುವ ಸೆಂಟ್ರಲ್ ಇಕ್ವಿಪಮೆಂಟ್ ಐಡೆಂಟಿಟಿ ರೆಜಿಸ್ಟಾರ್ (ಸಿಇಐಆರ್) ತಂತ್ರಾಂಶದಡಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಇದುವರೆಗೆ 306 ಮೊಬೈಲ್‍ಗಳನ್ನು ಪತ್ತೆ ಮಾಡಿದ್ದು, ಅವುಗಳನ್ನು ಅವುಗಳ ವಾರಸುದಾರರಿಗೆ ಹಸ್ತಾಂತರ ಮಾಡಲಾಗಿದೆ. ಇಂದು ಸುಮಾರು 15 ಲಕ್ಷ ರೂ.ಮೊತ್ತದ ವಿವಿಧ ಕಂಪನಿಯ 47 ಮೊಬೈಲ್‍ಗಳನ್ನು ಪತ್ತೆ ಮಾಡಿ ಅವುಗಳ ವಾರಸುದಾರಿಗೆ ನೀಡಲಾಗಿದೆ ಎಂದು ತಿಳಿಸಿದರು.
ಕಳವಾದ ಮೊಬೈಲ್ ಪತ್ತೆ ಮಾಡಿದ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪ್ರಭಾರಿ ಪೊಲೀಸ್ ನಿರೀಕ್ಷಕ ಶಿವಶಂಕರ ಸಾಹು, ಪಿಎಸ್‍ಐ ಕಿರಣ್, ಎಎಸ್‍ಐ ಮಂಜುಳಾ, ಸಿಬ್ಬಂದಿಗಳಾದ ಸಿದ್ದಪ್ಪ ಪಾಟೀಲ, ಉಮೇಶ್, ಅಶೋಕ, ಹಣಮಂತ, ಪ್ರಕಾಶ, ಧರ್ಮರಾವ, ಅಬ್ದುಲ್ ಚೌಧರಿ ಮತ್ತು ಕುಮಾರಿ ಅರ್ಚನಾ ಪಾಟೀಲ ಅವರ ಕಾರ್ಯವನ್ನು ಅವರು ಶ್ಲಾಘಿಸಿದರು.
ಸಾರ್ವನಿಕರು ವಾಹನ ಹತ್ತುವಾಗ, ಇಳಿಯುವಾಗ, ಪ್ರಯಾಣದ ಸಮಯದಲ್ಲಿ ಮತ್ತು ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ಸಂಚರಿಸುವಾಗ ಮೊಬೈಲ್ ಫೋನ್‍ಗಳ ಬಗ್ಗೆ ಜಾಗೃತೆ ವಹಿಸುವಂತೆ ಅವರು ಮನವಿ ಮಾಡಿದರು.