ಕಳಪೆ ಸ್ಪ್ರಿಂಕ್ಲರ್ ಪೈಪ್‍ಗಳ ವಿತರಣೆ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ-ಅಖಂಡ ಕರ್ನಾಟಕ ರೈತ ಸಂಘ ಎಚ್ಚರಿಕೆ

ಸಂಜೆವಾಣಿ ವಾರ್ತೆ,
ವಿಜಯಪುರ, ಜ.16:ರೈತರಿಗೆ ಕಳಪೆ ಸ್ಪ್ರಿಂಕ್ಲರ್ ಪೈಪ್ ಗಳ ವಿತರಣೆ ಮಾಡುತ್ತಿದ್ದು, ವ್ಯಾಪಕ ಭೃಷ್ಟಾಚಾರ ನಡೆದಿದೆ. ಈ ಬಗ್ಗೆ ಸರಕಾರ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥ ಕಂಪನಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಲೈಸನ್ಸ್ ರದ್ದುಪಡಿಸಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಸರಕಾರಕ್ಕೆ ಒತ್ತಾಯಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗೆ ಪೂರೈಸುತ್ತಿರುವ ಸ್ಪ್ರಿಂಕ್ಲರ್ ಪೈಪ್‍ಗಳನ್ನು ಶೇ. 90 ರಷ್ಟು ಕಳಪೆ ಮಟ್ಟದ ಕಚ್ಚಾ ವಸ್ತುಗಳನ್ನು ಉಪಯೋಗಿಸಿ ತಯಾರಿಸಲಾಗಿದೆ. ಈ ಪೈಪ್ ಗಳ ವಿತರಣೆಗೆ ಕೃಷಿ ಇಲಾಖೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅನುದಾನ ಪಡೆಯುತ್ತಿದೆ. ಆದಾಗ್ಯೂ ಕಳಪೆ ಪೈಪ್ ಗಳನ್ನು ವಿತರಿಸಿ ರೈತರಿಗೆ ಮೋಸ ಮಾಡಲಾಗುತ್ತಿದೆ ಎಂದು ಟೀಕಿಸಿದರು.
ಈ ಸಂಬಂಧ ಅಖಂಡ ಕರ್ನಾಟಕ ರೈತ ಸಂಘ ಪೈಪ್‍ಗಳ ಸಮೇತ ವಿಜಯಪುರ ಜಿಲ್ಲಾಧಿಕಾರಿಗಳ ಆವರಣದಲ್ಲಿ ಬೃಹತ್ ಪ್ರತಿಭಟನೆ ಮಾಡಿತ್ತು. ಲೋಕಾಯುಕ್ತರಿಗೂ ದೂರು ನೀಡಲಾಗಿತ್ತು. ಆದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದರು.
ಲೋಕಾಯುಕ್ತರಿಗೆ ಅಗತ್ಯದ ದಾಖಲೆಗಳನ್ನು ಸಲ್ಲಿಸಿದ್ದರೂ ತನಿಖೆಗೆ ಪೂರಕ ದಾಖಲೆಗಳನ್ನು ಮತ್ತೆ ಮತ್ತೆ ಕೇಳುವ ಮೂಲಕ ತನಿಖೆ ಮಾಡದೆ ಕಾಲಹರಣ ಮಾಡುತ್ತಿದೆ ಎಂದು ದೂರಿದರು.
ಸರಕಾರ ಕೂಡಲೇ ಈ ಸಂಬಂಧ ಕಳಪೆ ಪೈಪ್ ಪೂರೈಸಿದ ಕಂಪನಿ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಕಳಪೆ ಪೈಪ್ ಗಳ ಪ್ರದರ್ಶನ ಕೂಡಾ ಮಾಡಲಾಯಿತು.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ವಿಠಲ ಬಿರಾದಾರ, ಮಲಿಗೆಪ್ಪ ಸಾಸನೂರ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು