ಕಳಪೆ ಮೊಟ್ಟೆ ಪೂರೈಕೆ ತನಿಖೆಗೆ ಆದೇಶ

ಬೆಂಗಳೂರು, ಜು.೧೫- ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಮೊಟ್ಟೆ ವಿತರಣೆಯಾಗುತ್ತಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಕೊಳೆತ ಮೊಟ್ಟೆ ಪೂರೈಕೆ ಪತ್ತೆಯಾದ ಸ್ಥಳ ಮಾತ್ರವಲ್ಲದೇ ರಾಜ್ಯವ್ಯಾಪಿ ತನಿಖೆಗೆ ಆದೇಶಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮಗುಣಮಟ್ಟದ ಪೂರೈಕೆಯು ಸರ್ಕಾರದ ಕಾಳಜಿಯಾಗಿದೆ. ಪತ್ತೆಯಾದ ಸ್ಥಳದಲ್ಲಿ ಕ್ತಮವಹಿಸಿದರೆ ಸಾಲದು ಎಂದು ರಾಜ್ಯಮಟ್ಟದ ಅಧಿಕಾರಿಗೆ ತನಿಖೆ ಜವಾಬ್ದಾರಿ ಒಪ್ಪಿಸಿದ್ದು, ವರದಿ ಸಲ್ಲಿಕೆಯಾದ ನಂತರ ಕ್ರಮವಹಿಸುವೆ ಎಂದು ಅವರು ಮಾಹಿತಿ ನೀಡಿದರು.ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಟೆಂಡರ್ ಕರೆದು ಮೊಟ್ಟೆ ಪೂರೈಕೆ ಗುತ್ತಿಗೆ ನೀಡಿರುವ ಕಾರಣ ಆಯಾ ಅಧಿಕಾರಿಗಳಿಗೆ ನೋಟಿಸ್ ನೀಡಿ ಕ್ರಮವಹಿಸಲು ತಿಳಿಸಲಾಗಿದೆ. ಅದೇ ರೀತಿ, ಈಗಾಗಲೇ ಕಳಪೆ ಮೊಟ್ಟೆಗಳು ಸ್ಥಳಕ್ಕೆ ಸಂಬಂಧಿಸಿದ ಪೂರೈಕೆದಾರರಿಗೆ ನೋಟಿಸ್ ನೀಡಲು ಸೂಚಿಸಲಾಗಿದೆ ಎಂದು ಅವರು ತಿಳಿಸಿದರು.ರಾಜ್ಯದಲ್ಲಿ ೬೭,೫೭೦ ಅಂಗನವಾಡಿ ಕೇಂದ್ರಗಳು ಮತ್ತು ೨,೩೨೯ ಮಿನಿ ಅಂಗನವಾಡಿ ಕೇಂದ್ರಗಳು ಸೇರಿ ಒಟ್ಟು ೬೯,೮೯೯ ಅಂಗನವಾಡಿ ಕೇಂದ್ರಗಳಿವೆ. ೩೯,೫೦,೧೭೯ ಮಕ್ಕಳು ಇಲ್ಲಿ ದಾಖಲಾಗಿ ಸೌಲಭ್ಯ ಪಡೆಯುತ್ತಿದ್ದಾರೆ. ಅಂಗನವಾಡಿ ಕೇಂದ್ರಗಳಿಗೆ ಪೂರೈಕೆ ಆಗುವ ಆಹಾರ ಪದಾರ್ಥ ಕಳಪೆ ಗುಣಮಟ್ಟ ಆಗಿರೋದು ಗಮನಕ್ಕೆ ಬಂದಿದೆ. ಕಲಬುರಗಿಯಲ್ಲಿ ಇಂತಹ ಪ್ರಕರಣ ಗಮನಕ್ಕೆ ಬಂದಿದೆ ಎಂದೂ ಅವರು ಉಲ್ಲೇಖಿಸಿದರು.