ಕಳಪೆ ಬೀದಿ ದೀಪ ನಿರ್ವಹಣೆ : ಕತ್ತಲೆಯಲ್ಲಿ ಸರಾಫ್-ಕಿರಾಣಿ ಬಜಾರ್, ಮೋಚಿವಾಡ

ನಗರದಲ್ಲಿ ಶೇ.೭೦ – ೮೦ ಬೀದಿ ದೀಪ ಸುಧಾರಣೆಯೆಂದರೆ ಇದೆ ಏನು?
ರಾಯಚೂರು.ಜು.೧೪- ಜನಪ್ರತಿನಿಧಿಗಳು ಮತ್ತು ನಗರಸಭೆ ಹೇಳುವ ಸುಳ್ಳುಗಳಿಗೆ ನಗರದ ಜನ ವಾಟ್ಸಾಪ್‌ಗಳಲ್ಲಿ ಅಂದಿನ ಸ್ಥಿತಿಗತಿ ಬಗ್ಗೆ ವೈರಲ್ ಮಾಡುವ ಮೂಲಕ ಇದು ನಮ್ಮ ಪರಿಸ್ಥಿತಿ ಎಂದು ಹೇಳುವ ಜಾಣ್ಮೆ ಪ್ರದರ್ಶಿಸುತ್ತಿದ್ದಾರೆ.
ಜನಪ್ರತಿನಿಧಿಗಳು ವಿದ್ಯುತ್ ದೀಪ ಸುಧಾರಣೆಯ ಬಗ್ಗೆ ಹೇಳಿಕೆ ನೀಡಿದ ನಂತರ ಸ್ಥಳೀಯ ಜನರು ತಮ್ಮ ವಾರ್ಡ್ ಮತ್ತು ಬಡಾವಣೆಗಳಲ್ಲಿ ಬೀದಿ ದೀಪಗಳ ಸ್ಥಿತಿಗತಿ ಬಗ್ಗೆ ಕತ್ತಲೆಯಲ್ಲಿಯೆ ಭಾವಚಿತ್ರ ಹಾಕುವ ಮೂಲಕ ಅಲ್ಲಿಯ ಪರಿಸ್ಥಿತಿಯನ್ನು ಜನಪ್ರತಿನಿಧಿಗಳು ಮತ್ತು ನಗರಸಭೆಯಿಂದ ಬಿಚ್ಚಿಟ್ಟಿದ್ದಾರೆ. ನಗರದಲ್ಲಿ ಶೇ.೭೦ ರಿಂದ ೮೦ ರಷ್ಟು ಬೀದಿ ದೀಪ ಸುಧಾರಣೆಯಾಗಿದೆಂದು ಹೇಳುವ ಜನಪ್ರತಿನಿಧಿಗಳಿಗೆ ಜನರು ವಾರ್ಡ್‌ಗಳಲ್ಲಿ ಕತ್ತಲೆಯ ಪರಿಸ್ಥಿತಿ ಬಗ್ಗೆ ಸಾಕ್ಷಾಧಾರದೊಂದಿಗೆ ಮಾಹಿತಿ ನೀಡಿ, ಇದೇನಾ ಶೇ.೭೦, ೮೦ ರಷ್ಟು ಸುಧಾರಣೆ ಅರ್ಥ ಎಂದು ಪ್ರಶ್ನಿಸುತ್ತಿದ್ದು, ಇದಕ್ಕೆ ಜನಪ್ರತಿನಿಧಿಗಳು ಉತ್ತರಿಸಬೇಕಾಗಿದೆ.
ಇದು ಸಾಮಾಜಿಕ ಜಾಲತಾಣದ ಕಾಲ. ನಗರದ ಬಹುತೇಕ ಜನರಲ್ಲಿ ಜನರ ಕೈಯಲ್ಲಿ ಕ್ಯಾಮೆರಾ ಸಹಿತ ಮೊಬೈಲ್‌ಗಳಿವೆ. ತಕ್ಷಣವೆ ಪ್ರತಿಕ್ರಿಯಿಸುವ ನಾಗರಿಕರಿಗೆ ಕ್ಯಾಮೆರಾ ಸಾತ್ ನೀಡಿದರೆ, ಜನಪ್ರತಿನಿಧಿಗಳು, ನಗರಸಭೆಯ ಆಡಳಿತದ ವೈಖರಿ ಎಂಥಹ ಮುಜುಗರಕ್ಕೆ ಗುರಿಯಾಗಬಹುದು ಎನ್ನುವುದಕ್ಕೆ ಈ ಸಂದೇಶ ನಿದರ್ಶನವಾಗಿದೆ. ನಗರದ ಮುಖ್ಯರಸ್ತೆಗಳಾದ ಬಂಗಾರ ಬಜಾರ್, ಮೊಚಿವಾಡ ರಸ್ತೆಗಳಲ್ಲಿ ಬೀದಿ ದೀಪಗಳಿಲ್ಲದೆ ಕತ್ತಲಿನಲ್ಲಿ ಜನ ವಾಸಿಸುವಂತಾಗಿದೆ.
ಬಂಗಾರ ವ್ಯಾಪಾರ ಮತ್ತು ಬಂಗಾರದ ಕೆಲಸ ಮಾಡುವವರ ಅಂಗಡಿಗಳು, ಬೇಕರಿಗಳು, ಬುಕ್ ಅಂಗಡಿಗಳು, ಕಿರಾಣಿ ಅಂಗಡಿಗಳು ಮತ್ತು ಇನ್ನಿತರ ಅಂಗಡಿಗಳು ಇರುವ ರಸ್ತೆಯಲ್ಲಿಯೆ ಬೀದಿ ದೀಪಗಳಿಲ್ಲದೆ ಇರುವುದು ನಗರಸಭೆಯ ನಿರ್ಲಕ್ಷ್ಯಗೆ ಕಳ್ಳತನಕ್ಕೆ ದಾರಿ ಮಾಡಿಕೊಡುವಂತಾಗಿದೆ ಎನ್ನುವ ಭಯ ಜನರಲ್ಲಿ ಮೂಡಿಸಿದೆ.
ಬೀದಿ ದೀಪಗಳ ಸಮಸ್ಯೆಯಿಂದ ದಿನಗಳಲ್ಲಿ ಅಪಘಾತ ಸಂಭವಿಸಿದರೆ, ಕಳುವಿನ ಪ್ರಕರಣ ನಡೆದರೆ ಇದಕ್ಕೆ ನಗರಸಭೆಯೆ ನೇರ ಹೊಣೆಯಾಗಲಿದೆ ಎನ್ನುವುದು ಜನರ ಆರೋಪವಾಗಿದೆ.