ಕಳಪೆ ಬೀಜ ವಿತರಿಸಿದರೆ ಕಠಿಣ ಕ್ರಮ: ಬಳ್ಳಾರಿ

ಬ್ಯಾಡಗಿ, ಮೇ27: ರೈತರಿಗೆ ರಿಯಾಯಿತಿ ದರದಲ್ಲಿ ಪ್ರಮಾಣೀಕೃತವಾದ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ವಿತರಣೆ ಮಾಡಬೇಕು. ಕಳಪೆ ಬಿತ್ತನೆ ಬೀಜಗಳನ್ನು ವಿತರಣೆ ಮಾಡಿದರೆ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.
ಪಟ್ಟಣದ ರೈತಸಂಪರ್ಕ ಕೇಂದ್ರದಲ್ಲಿ ಬುಧವಾರ ಪ್ರಸಕ್ತ ಸಾಲಿನ ಬೀಜ ವಿತರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸರ್ಕಾರ ನಿಗದಿಪಡಿಸಿದ ದರದಲ್ಲಿ ಬೀಜ ಗೊಬ್ಬರ ಮಾರಾಟ ಮಾಡಬೇಕು, ರೈತರಿಂದ ಹೆಚ್ಚಿನ ಬೆಲೆ ಪಡೆದ ಬಗ್ಗೆ ದೂರುಗಳು ಬಂದಲ್ಲಿ ಅಂತಹ ಅಂಗಡಿಗಳ ಲೈಸನ್ಸ ರದ್ದುಪಡಿಸಿ, ಕಪ್ಪುಪಟ್ಟಿಗೆ ಸೇರಿಸಲಾಗುವುದು. ರೈತರು ಗುಣಮಟ್ಟದ ಬಿತ್ತನೆ ಬೀಜಗಳನ್ನು ಪಡೆದು ಉತ್ತಮ ಬೆಳೆ ಬೆಳೆಯುವಂತೆ ರೈತರಿಗೆ ಕರೆ ನೀಡಿದರಲ್ಲದೇ, ಕೊರೋನಾ ಸೋಂಕು ಹೆಚ್ಚಳದಿಂದ ತೀವ್ರ ಸಮಸ್ಯೆಯಾಗುತ್ತಿದೆ. ರೈತರನ್ನು ಕಚೇರಿಗೆ ಅಲೆದಾಡಿಸಬೇಡಿ, ವಿತರಣೆ ಕೇಂದ್ರದಲ್ಲಿ ಗುಂಪು ಸೇರಲು ಅವಕಾಶ ನೀಡಬೇಡಿ ಎಂದು ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಎ.ಡಿ.ವೀರಭದ್ರಪ್ಪ ಮಾತನಾಡಿ, ತಾಲೂಕಿನಲ್ಲಿ 32 ಸಾವಿರ ಹೆಕ್ಟೇರು ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತಿದೆ. ತಾಲೂಕಿನ ಬ್ಯಾಡಗಿ ಹಾಗೂ ಕಾಗಿನೆಲೆಯಲ್ಲಿನ ರೈತ ಸಂಪರ್ಕ ಕೇಂದ್ರ ಸೇರಿದಂತೆ ಮೋಟೆಬೆನ್ನೂರು ಮತ್ತು ಚಿಕ್ಕಬಾಸೂರು ಗ್ರಾಮಗಳಲ್ಲಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ಬೀಜ ವಿತರಣೆ ಕೇಂದ್ರಗಳನ್ನು ತೆರೆಯಲಾಗಿದ್ದು, ಸರ್ಕಾರ ನಿಗದಿಪಡಿಸಿದ ಬೀಜಗಳು ರಿಯಾಯ್ತಿ ದರದಲ್ಲಿ ಲಭ್ಯವಿವೆ. ರೈತರು ಬೀಜ ಪ್ಯಾಕೇಟ್ ಖರೀದಿಸುವಾಗ ಅಧಿಕೃತವಾಗಿ ಪಾವತಿ ಪಡೆಯಬೇಕು. ಡಿಎಪಿ ಗೊಬ್ಬರವನ್ನು ಹಳೆಯ ದರ (1230)ದಲ್ಲಿ ಖರೀದಿಸಬೇಕು. ಯಾವುದೇ ಸಮಸ್ಯೆ ಹಾಗೂ ಮಾಹಿತಿ ಬೇಕಾದಲ್ಲಿ ರೈತಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬೇಕು. ಕೇಂದ್ರದಲ್ಲಿ ಸಿಬ್ಬಂದಿಗಳಿಗೆ ಕೊರೋನಾ ನಿಯಮ ಪಾಲಿಸಲು ತಿಳಿಸಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷೆ ಸವಿತಾ ಸುತ್ತಕೋಟಿ, ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ, ರೈತ ಮುಖಂಡರಾದ ಬಸವರಾಜ ಸಂಕಣ್ಣನವರ, ಅಶೋಕ ಮಾಳೇನಹಳ್ಳಿ, ಉಪನಿರ್ದೆಶಕಿ ಜಿ.ಎಸ್. ಸ್ಪೂರ್ತಿ, ಟಿಇಓ ಎನ್.ತಿಮ್ಮಾರೆಡ್ಡಿ, ತಾಂತ್ರಿಕ ಕೃಷಿ ಅಧಿಕಾರಿ ಬಸವರಾಜ ಮರಗಣ್ಣನವರ, ಕೃಷಿ ಅಧಿಕಾರಿಗಳಾದ ಆರ್. ಮಂಜುನಾಥ, ನಾಗರಾಜ ಬನ್ನಿಹಟ್ಟಿ, ಆರ್.ಟಿ.ಕರಿಲಿಂಗಪ್ಪ, ಕೃಷಿ ಸಹಾಯಕ ಅಧಿಕಾರಿಗಳಾದ ಎಸ್.ಪಿ.ಮರಬಸಣ್ಣನವರ, ಕೆ.ಬಿ.ಹಿರೇಹಾಳ, ಅನುವುಗಾರ ಅಣ್ಣಪ್ಪ ದ್ಯಾಮನಗೌಡ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಗುಣಮಟ್ಟದ ಬೀಜ ವಿತರಣೆಗೆ ಕ್ರಮ..!!
ಸರ್ಕಾರವು ನಿಗದಿ ಮಾಡಿದ ರಿಯಾಯಿತಿ ದರದಲ್ಲಿ ರೈತರಿಗೆ ಅಗತ್ಯವಾದ ಹೆಸರುಕಾಳು, ಶೇಂಗಾ, ತೊಗರಿ, ಅಲಸಂದೆ, ಮೆಕ್ಕೆಜೋಳ, ಬಿಳಿಜೋಳದ ಬೀಜಗಳನ್ನು ನೀಡಲಾಗುತ್ತಿದ್ದು, ರೈತರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು.
ವಿ.ಮಂಜುನಾಥ
ಜಿಲ್ಲಾ ಜಂಟಿ ಕೃಷಿ ನಿರ್ದೆಶಕರು ಹಾವೇರಿ.