ಕಳಪೆ ಬೀಜ ಮಾರಾಟ ಮಾಡುವವರ ವಿರುದ್ಧ ಕ್ರಮ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಜು.೧೪:ರಾಜ್ಯಾದ್ಯಂತ ಕಳಪೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಿಧಾನ ಪರಿಷತ್‌ನಲ್ಲಿಂದು ಹೇಳಿದ್ದಾರೆ.ಕಳೆದ ೪ ವರ್ಷಗಳಲ್ಲಿ ಕಳಪೆ ಬಿತ್ತನೆ ಬೀಜ ಮಾರಾಟ ಮಾಡಿದ ೬೧ ಪ್ರಕರಣಗಳು ಹಾಗೂ ಕಳಪೆ ರಸಗೊಬ್ಬರ ಮಾರಿದ ೨೬ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮೊಕ್ಕದ್ದಮೆ ಹೂಡಲಾಗಿದೆ ಎಂದು ಹೇಳಿದರು.ಕೆ. ಅಬ್ದುಲ್‌ಜಫರ್ ಪ್ರಶ್ನೆಗೆ ಉತ್ತರಿಸಿದ ಸಚಿವರು ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳನ್ನು ಸರಬರಾಜು ಮಾಡಿದ್ದ ಮಾರಾಟಗಾರರ ವಿರುದ್ಧ ೭೭೪ ಪ್ರಕರಣಗಳನ್ನು ದಾಖಲಿಸಲಾಗಿದೆ.ಕಳಪೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡದಂತೆ ನಿಗಾ ವಹಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿಚಕ್ಷಣಾದಳ ರಚನೆ ಮಾಡಲಾಗಿದೆ. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಉಪ ನಿರ್ದೇಶಕರು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದರು.ಪರವಾನಗಿ ರದ್ದು ಎಚ್ಚರಿಕೆ ರಾಜ್ಯಾದ್ಯಂತ ನಕಲಿ ಬಿತ್ತನೆ ಬೀಜ, ರಸಗೊಬ್ಬರ ಮಾರಾಟ ಮಾಡುವುದು ಕಂಡು ಬಂದರೆ ಮಾರಾಟಗಾರರ ಪರವಾನಗಿಯನ್ನು ರದ್ದು ಮಾಡುವುದಾಗಿ ಸಚಿವ ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದ್ದಾರೆ.ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ಮತ್ತು ರಸಗೊಬ್ಬರ ಪೂರೈಕೆ ಮಾಡಲು ಎಲ್ಲ ಕ್ರಮಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.ಯಾವ ಸಮಯದಲ್ಲಿ ಹಾಗೂ ಯಾವ ಮಣ್ಣಿಗೆ ಯಾವ ಬೆಳೆ ಬೆಳೆಯಬೇಕು ಎನ್ನುವ ಬಗ್ಗೆ ಕೃಷಿ ವಿಶ್ವವಿದ್ಯಾಲಯ ಮತ್ತು ವಿಜ್ಞಾನಿಗಳಿಂದ ಮಾಹಿತಿ ಪಡೆದು ರೈತರಿಗೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಪರಿಶೀಲಿಸಿ ಕ್ರಮ
ರಾಜ್ಯದಲ್ಲಿ ರೈತರಿಗೆ ಯಂತ್ರೋಪಕರಣಗಳ ಬಳಕೆ ಉತ್ತೇಜಿಸಲು ಹಾಗೂ ಇಂಧನ ವೆಚ್ಚ ಕಡಿಮೆ ಮಾಡಲು ರೈತ ಶಕ್ತಿ ಯೋಜನೆಯಡಿ ಪ್ರತಿ ಎಕರೆ ಡೀಸನ್‌ಗೆ ನೀಡುವ ಸಹಾಯ ಧನವನ್ನು ೨೫೦ ರೂ.ನಿಂದ ೫೦೦ ರೂ.ಗೆ ಹೆಚ್ಚಿಸುವ ಕುರಿತು ಪರಿಶೀಲಿಸಲಾಗುವುದು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಿಧಾನ ಪರಿಷತ್‌ನಲ್ಲಿಂದು ತಿಳಿಸಿದ್ದಾರೆ.ಎಂ. ನಾಗರಾಜ್ ಪ್ರಶ್ನೆಗೆ ಉತ್ತರಿಸಿದ ಸಚಿವರು ಕೃಷಿ ಇಲಾಖೆಗೆ ಮೀಸಲಿಟ್ಟ ಅನುದಾನ ಬಜೆಟ್ ಅನುಮೋದನೆ ಸಿಕ್ಕ ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.