ಕಳಪೆ ಬಿತ್ತನೆ ಬೀಜ ಮಾರಾಟವಾಗದಂತೆ ಕ್ರಮ ವಹಿಸಿ: ಪಾಟೀಲ

ಗದಗ ಜೂ.3: ಜಿಲ್ಲೆಯಲ್ಲಿ ಮುಂಗಾರು ಮಳೆ ಬೀಳುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಆರಂಭವಾಗಿದ್ದು ರೈತರಿಗೆ ಬಿತ್ತನೆಗೆ ಅಗತ್ಯವಿರುವ ಬೀಜ ಗೊಬ್ಬರ ಕಳಪೆ ಪೂರೈಕೆಯಾಗದಂತೆ ಕೃಷಿ ಇಲಾಖಾಧಿಕಾರಿಗಳು ಹೆಚ್ಚು ನಿಗಾ ವಹಿಸಬೇಕೆಂದು ಸಣ್ಣ ಕೈಗಾರಿಕೆ , ವಾರ್ತಾ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಸೂಚಿಸಿದರು.
ನರಗುಂದದ ಗೃಹ ಕಚೇರಿಯಿಂದ ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಜರುಗಿದ ವಿಡಿಯೋ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡಿದರು.
ಕೊರೋನಾ ಲಾಕ್‍ಡೌನ್ ಸಮಯದಲ್ಲಿ ನಿಯಂತ್ರಿತ ಕೃಷಿ ಚಟುವಟಿಕೆಗಳನ್ನು ನಡೆಸಲು ಸರ್ಕಾರ ಅನುಮತಿ ನೀಡಿದೆ. ಅದರಂತೆ ಜಿಲ್ಲೆಯಲ್ಲಿಯೂ ಸಹ ರೈತರಿಗೆ ಅನುಕೂಲವಾಗುವಂತೆ ಬೆಳಿಗ್ಗೆ 6 ರಿಂದ ಮ. 12 ರವರೆಗೆ ಬಿತ್ತನೆ ಬೀಜ, ಗೊಬ್ಬರ ಹಾಗೂ ಕೃಷಿ ಯಂತ್ರೋಪಕರಣಗಳು ದೊರೆಯುವಂತೆ ಕ್ರಮ ವಹಿಸಲಾಗಿದೆ. ರೈತರಿಗೆ ನಿಗದಿತ ದರದಲ್ಲಿ ಬೀಜ ಗೊಬ್ಬರ ಮತ್ತು ಕ್ರಿಮಿನಾಶಕ ಔಷಧಗಳು ದೊರೆಯುವಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.
ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ರೈತರಿಗೆ ಸುಲಭವಾಗಿ ಗುಣಮಟ್ಟದ ಬಿತ್ತನೆ ಬೀಜ, ರಸಗೊಬ್ಬರ ದೊರಕುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿ ಗೊಂದಲಮಯ ವಾತಾವರಣ ನಿರ್ಮಾಣವಾಗದಂತೆ ನೋಡಿಕೊಳ್ಳುವಂತೆ ತಿಳಿಸಿದರು.
ಗ್ರಾಮೀಣ ಭಾಗದಿಂದ ನಗರಕ್ಕೆ ಬಿತ್ತನೆ ಬೀಜ, ರಸಗೊಬ್ಬರ ಖರೀದಿಗೆ ಆಗಮಿಸುವ ರೈತರು ಕೊರೋನಾ ಸೋಂಕಿನ ನಿಯಂತ್ರಣ ಕ್ರಮಗಳನ್ನು ಪಾಲಿಸಬೇಕು. ರಸಗೊಬ್ಬರ ಹಾಗೂ ಬಿತ್ತನ ಬೀಜ ಅಂಗಡಿಗಳಲ್ಲಿ ಸಾಮಾಜಿಕ ಅಂತರದೊಂದಿಗೆ ವ್ಯವಹರಿಸುವಂತೆ ಸಂಬಂಧಿತ ಅಧಿಕಾರಿಗಳು ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಹೇಳಿದರು.
ಸಚಿವರು ತಾಲೂಕಾವಾರು ಅಗತ್ಯವಿರುವ ಬಿತ್ತನೆ ಬೀಜ , ರಸಗೊಬ್ಬರ ಕುರಿತು ತಾಲೂಕಾ ಕೃಷಿ ಅಧಿಕಾರಿಗಳಿಂದ ಮಾಹಿತಿ ಪಡೆದು ಕೊರತೆಯಾಗದಂತೆ ಮುಂಜಾಗ್ರತಾ ಕ್ರಮವಾಗಿ ದಾಸ್ತಾನು ಮಾಡಿಟ್ಟುಕೊಳ್ಳುವಂತೆ ಅಗತ್ಯದ ಕ್ರಮ ವಹಿಸಬೇಕು.ಸೂಕ್ತ ರೀತಿಯಲ್ಲಿ ವಿತರಣೆ ಮಾಡಬೇಕು. ಯಾವುದೇ ಕಾರಣಕ್ಕೂ ವಿತರಣೆಯಲ್ಲಿ ನೂಕುನುಗ್ಗಲಾಗದಂತೆ ನೋಡಿಕೊಳ್ಳುವಂತೆ ತಿಳಿಸಿದರು.
ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಟಿ.ಎಸ್. ಮಾತನಾಡಿ ರಸಗೊಬ್ಬರಗಳಾದ ಡಿಎಪಿ ಪ್ರತಿ ಚೀಲಕ್ಕೆ 1200, ಕಾಂಪ್ಲೆಕ್ಸ್ 16-20-13 ಪ್ರತಿ ಚೀಲಕ್ಕೆ 1050, ಕಾಂಪ್ಲೆಕ್ಸ್ 15-15-15 ಪ್ರತಿ ಚೀಲಕ್ಕೆ 1150, ಅದೇ ರೀತಿ ಯೂರಿಯಾ ಪ್ರತಿ ಚೀಲಕ್ಕೆ 266 ರೂ, ಗರಿಷ್ಟ ಮಾರಾಟ ಬೆಲೆ ನಿಗದಿಪಡಿಸಲಾಗಿದೆ. ರಸಗೊಬ್ಬರ ಮಾರಾಟಗಾರರಿಗೆ ಗರಿಷ್ಟ ಮಾರಾಟ ಬೆಲೆ ಮೀರದಂತೆ ಮಾರಾಟ ಮಾಡಲು ಸೂಚಿಸಲಾಗಿದೆ ಎಂದರು.
2021ನೇ ಸಾಲಿನ ಮುಂಗಾರು ಬಿತ್ತನೆ ಬೀಜದ ಲಭ್ಯತೆಗೆ ಸಂಬಂಧಿಸಿದಂತೆ ಮಾಹಿತಿ ನೀಡುತ್ತಾ ಹೈಬ್ರೀಡ್ ಜೋಳ ವಿವಿಧ ತಾಲೂಕುಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆ 75 ಕ್ವಿಂಟಲ್, ಮುಸುಕಿನ ಜೋಳ 3286 ಕ್ವಿಂಟಲ್, ಸಜ್ಜೆ 190 ಕ್ವಿಂಟಲ್, ಹೆಸರು 721 ಕ್ವಿಂಟಲ್, ತೊಗರಿ 100 ಕ್ವಿಂಟಲ್ , ಶೇಂಗಾ 406 ಕ್ವಿಂಟಲ್ , ಸೂರ್ಯಕಾಂತಿ 171 ಕ್ವಿಂಟಲ್ , ಹೈಬ್ರೀಡ್ ಹತ್ತಿ 52072(ಪ್ಯಾಕೆಟ್) ಜಿಲ್ಲೆಯಲ್ಲಿ ಸಂಗ್ರಹವಿದೆ. ಪ್ರಸಕ್ತ ಸಾಲಿನ ಮುಂಗಾರಿಗೆ ಅಗತ್ಯವಿರುವ ಬಿತ್ತನೆ ಬೀಜ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು , ಜಿ.ಪಂ. ಸಿ.ಇ.ಓ ಭರತ್ ಎಸ್, ತೋಟಗಾರಿಕೆ ಹಿರಿಯ ಅಧಿಕಾರಿಗಳು ಸೇರಿದಂತೆ ತಾಲೂಕಾ ಕೃಷಿ ಅಧಿಕಾರಿಗಳು ಹಾಜರಿದ್ದರು.