ಕೋಲಾರ,ಜೂ.೧- ಟೊಮೋಟೋ ಗೆ ಬಾಧಿಸುತ್ತಿರುವ ಬಿಂಗಿ (ಎಲೆ ಮುದುಡು) ರೋಗ ನಿಯಂತ್ರಣಕ್ಕೆ ವಿಶೇಷ ವಿಜ್ಞಾನಿಗಳ ತಂಡ ರಚನೆ ಮಾಡಿ ಕಳಪೆ ಬಿತ್ತನೆ ಬೀಜ ಕೀಟ ನಾಶಕ ವಿತರಣೆ ಮಾಡುವ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ರೈತ ಸಂಘದಿಂದ ತೋಟಗಾರಿಕೆ ಇಲಾಖೆ ಮುಂದೆ ನಷ್ಟ ಬೆಳೆ ಸಮೇತ ಹೋರಾಟ ಮಾಡಿ ಉಪ ನಿರ್ದೇಶಕರಾದ ಕುಮಾರಸ್ವಾಮಿರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಜಿಲ್ಲೆಗೆ ನೂತನವಾಗಿ ಆಯ್ಕೆ ಆಗಿರುವ ೬ ಶಾಸಕರು ರೈತರ ಮೇಲೆ ಕಾಳಜಿ ಇದ್ದರೆ ಸರ್ಕಾರದ ಮೇಲೆ ಒತ್ತಡ ಹಾಕಿ ರೋಗದಿಂದ ನಷ್ಟವಾಗಿರುವ ಪ್ರತಿ ಎಕರೆಗೆ ೫ ಲಕ್ಷ ಪರಿಹಾರ ವಿತರಣೆ ಮಾಡುವ ಜೊತೆಗೆ ರೈತರ ಬೆವರ ಹನಿಯನ್ನು ಕಸಿಯುತ್ತಿರುವ ನಕಲಿ ಬಿತ್ತನೆ ಬೀಜ ಕ್ರಿಮಿನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ನೊಂದ ರೈತರ ಪರ ನಿಲ್ಲಬೇಕೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.
ಜಿಲ್ಲಾ ಕಾರ್ಯದ್ಯಕ್ಷ ವಕ್ಕಲೇರಿ ಹನುಮಯ್ಯ ಮಾತನಾಡಿ ವ್ಯವಸಾಯ ಮನೆಮಕ್ಕಳೆಲ್ಲಾ ವಿಷ ಕುಡಿದು ಸಾಯ ಎಂಬಂತಾಗಿದೆ. ೨೪ ಗಂಟೆ ದುಡಿಯುವ ರೈತರ ದುಡಿಮೆಗೆ ಬೆಲೆ ಇಲ್ಲದಂತಾಗಿದೆ ಯಾವುದೇ ಸರ್ಕಾರ ಅಧಿಕಾರಕ್ಕೆ ಬಂದರೂ ಆರೋಪ ಪ್ರತ್ಯಾರೋಪದಲ್ಲಿ ಕಾಲಹರಣ ಮಾಡುತ್ತಾರೆ ಹೊರತು ದೇಶಕ್ಕೆ ಅನ್ನ ಹಾಕುವ ಅನ್ನದಾತನ ಸಮಸ್ಯೆಗಳಿಗೆ ಸ್ಪಂದಿಸುವುದಿಲ್ಲ ಎಂದು ಆರೋಪ ಮಾಡಿದರು.
ಕಳಪೆ ಔಷಧಿಗಳಿಂದ ರೋಗ ನಿಯಂತ್ರಣವಿಲ್ಲ-
ಕಳಪೆ ಬಿತ್ತನೆ ಬೀಜಕ್ಕೆ ನಿಯಂತ್ರಣವಿಲ್ಲ:
ರೋಗಗಳಿಗೆ ಕಾರಣ ಏನು ಎಂಬುದು ತಿಳಿಯದೆ ರೈತ ಕಂಗಲಾಗಿ ಕೃಷಿಯಿಂದ ವಿಮುಕ್ತಿ ಹೊಂದುವ ಮುಂಚೆ ಸಂಬಂಧಪಟ್ಟ ಅಧಿಕಾರಿಗಳು ರೋಗಗಳಿಗೆ ಕಾರಣವಾಗಿರುವ ವೈರಸ್ ಪತ್ತೆ ಹಚ್ಚಲು ವಿಶೇಷ ವಿಜ್ಞಾನಿಗಳ ತಂಡ ರಚನೆ ಮಾಡಿ ಕಳಪೆ ಬಿತ್ತನೆ ಬೀಜ ಕೀಟ ನಾಶಕ ವಿತರಣೆ ಮಾಡುವ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ನಷ್ಟವಾಗಿರುವ ಪ್ರತಿ ಎಕರೆಗೆ ೫ ಲಕ್ಷ ಪರಿಹಾರ ನೀಡಬೇಕೆಂದು ಮನವಿ ನೀಡಿ ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಉಪ ನಿರ್ದೇಶಕರಾದ ಕುಮಾರಸ್ವಾಮಿರವರು ಜಿಲ್ಲಾಧಿಕಾರಿಗಳ ಹಾಗೂ ಸರ್ಕಾರದ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ನೀಡುವ ಭರವಸೆ ನೀಡಿದರು.
ಹೋರಾಟದಲ್ಲಿ ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಮಂಗಸಂದ್ರ ತಿಮ್ಮಣ್ಣ, ಕುವ್ವಣ್ಣ, ವೆಂಕಟೇಶಪ್ಪ, ಗೋವಿಂದಪ್ಪ, ಯಲ್ಲಪ್ಪ, ಹರೀಶ್, ವೆಂಕಟೇಶ್, ಕದರಿನತ್ತ ಅಪ್ಪೋಜಿರಾವ್, ರಾಮಸಾಗರ ವೇಣು, ಸುರೇಶ್ ಬಾಬು, ಯಲುವಳ್ಳಿ ಪ್ರಭಾಕರ್, ಆನಂದ್‌ರೆಡ್ಡಿ, ಗಿರೀಶ್, ಪಾರುಕ್‌ಪಾಷ, ಬಂಗಾರಿ ಮಂಜು, ವಿಜಯ್‌ಪಾಲ್, ವಿಶ್ವ, ಭಾಸ್ಕರ್, ರಾಜೇಶ್, ದೇವರಾಜ್, ಗುರುಮೂರ್ತಿ, ಮುಂತಾದವರಿದ್ದರು.