ಕಳಪೆ ಗುಣಮಟ್ಟದ ವಸ್ತು ಮಾರಾಟಗಾರರ ವಿರುದ್ಧ ಕ್ರಮ

ವಿಜಯಪುರ, ಮೇ.3-ಕೋವಿಡ್ -19 ಎರಡನೇ ಅಲೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಜನತಾ ಕಫ್ರ್ಯೂ ಜಾರಿಗೊಳಿಸಲಾಗಿದ್ದು, ಸಾರ್ವಜನಿಕರಿಗೆ ಅಗತ್ಯವಸ್ತುಗಳನ್ನು ಪಡೆಯುವ ಕುರಿತು ಬೆಳಿಗ್ಗೆ 6.00 ಗಂಟೆಯಿಂದ 10.00 ಗಂಟೆಯವರೆಗೆ ಸಮಯ ನಿಗದಿಪಡಿಸಲಾಗಿದೆ.ಕಳಪೆ ಗುಣಮಟ್ಟದ ವಸ್ತು ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರು ತಿಳಿಸಿದ್ದಾರೆ.
ಜಿಲ್ಲೆಯ ಎಲ್ಲಾ ಅಗತ್ಯ ವಸ್ತುಗಳ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳು ನಿಗದಿತ ಬೆಲೆಯಲ್ಲಿ ಹಾಗೂ ಗುಣಮಟ್ಟದ ವಸ್ತುಗಳನ್ನು ಗ್ರಾಹಕರಿಗೆ ಮಾರಾಟ ಮಾಡಬೇಕು.ಕೃತಕ ಅಭಾವ ಸೃಷ್ಟಿಸಿ ಬೆಲೆಯಲ್ಲಿ ಹೆಚ್ಚಳ ಮಾಡುವುದು ಮತ್ತು ಕಳಪೆ ಮಟ್ಟದ ವಸ್ತುಗಳನ್ನು ವಿತರಣೆ ಮಾಡಿದ್ದಲ್ಲಿ ಕರ್ನಾಟಕ ಅಗತ್ಯ ವಸ್ತುಗಳ (ಲೆಕ್ಕಪತ್ರ ನಿರ್ವಹಣೆ ಹಾಗೂ ದರ ಪ್ರದರ್ಶನ) ಆದೇಶ 1981 ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಆದೇಶ 2006 ಮೇರೆಗೆ ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ .
ಜಿಲ್ಲೆಯಲ್ಲಿ ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ಬೆಲೆಯಲ್ಲಿ ಮಾರಾಟ ಮಾಡಿರುವುದು ಕಂಡುಬಂದಲ್ಲಿ ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಛೇರಿಯ ದೂರವಾಣಿ ಸಂಖ್ಯೆ 9380443752 ಈ ಸಂಖ್ಯೆಗೆ ಕಚೇರಿ ಸಮಯದಲ್ಲಿ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.