ಕಳಪೆ ಕ್ರಿಮಿನಾಶಕ ಮಾರಾಟದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ಬಳ್ಳಾರಿ, ಅ.29: ಜಿಲ್ಲೆಯಲ್ಲಿ ರಸಗೊಬ್ಬರ ಮತ್ತು ಕ್ರಿಮಿನಾಶಕವನ್ನು ಮನಸೋ ಇಚ್ಛೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ, ಕಳಪೆ ಕ್ರಿಮಿನಾಶಕ ಮಾರಾಟ ಮಾಡುತ್ತಿದ್ದು ಅದನ್ನು ತಡೆಯಬೇಕೆಂದು ಆಗ್ರಹಿಸಿ ಇಂದು ನಗರದ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರ ಕಛೇರಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನೆ ನಡೆಸಿತು.
ನಿಗಧಿತ ಬೆಲೆಗಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ದೂರು ನೀಡಿದರೆ ಯಾವುದೇ ಕ್ರಮ ಜರುಗಿಸಿಲ್ಲ.
ರಸಗೊಬ್ಬರ, ಬೀಜ, ಕ್ರಿಮಿನಾಶಕ ಮಾರಾಟದ ಅಂಗಡಿಗಳಿಗೆ ನಿಯಮ ಮೀರಿ ಅನುಮತಿ ನೀಡಲಾಗುತ್ತಿದೆ. ಕೃಷಿ ಇಲಾಖೆ ಅಧಿಕಾರಿಗಳು ಇದರಲ್ಲಿ ಹಣಕ್ಕಾಗಿ ಶಾಮೀಲಾಗಿದ್ದಾರೆ.
ಯಾವುದೇ ಅಂಗಡಿಯಲ್ಲಿ ಜಿ.ಎಸ್.ಟಿ ಬಿಲ್ ನೀಡಿಲ್ಲ ಈ ಬಗ್ಗೆ ಹೇಳಿದರೆ ಅಧಿಕಾರಿಗಳಿಂದ ಬೇಜವಾಬ್ದಾರಿ ಉತ್ತರ ಬರುತ್ತೆ ಕೂಡಲೇ ಕಳಪೆ ಕ್ರಿಮಿನಾಶಕ ಮಾರಾಟ ನಿಲ್ಲಬೇಕು, ನಿಗಧಿತ ಬೆಲೆಗೆ ಮಾರಾಟ ಆಗಬೇಕು, ಅಧಿಕೃತ ಬಿಲ್ ನೀಡುವ ವ್ಯವಸ್ಥೆ ಆಗಬೇಕು ಎಂದು ಆಗ್ರಹಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರುಗಳಾದ ವಿ.ಎಸ್.ಶಿವಶಂಕರ್, ಗಾಳಿ ಬಸವರಾಜ್, ತಿಪ್ಪೇಸ್ವಾಮಿ, ವಿರುಪಾಕ್ಷಪ್ಪ, ಎನ್.ಸೋಮಪ್ಪ, ಮೊದಲಾದವರು ಪಾಲ್ಗೊಂಡಿದ್ದರು.