ಕಳಪೆ ಕಾಮಗಾರಿ: ಮಳೆಗೆ ಕೊಚ್ಚಿ ಹೋದ ರಸ್ತೆ

ಹುಳಿಯಾರು, ಏ. ೨೭- ಹೋಬಳಿಯ ಬರದಲೆಪಾಳ್ಯದಲ್ಲಿ ಕಳೆದ ಫೆಬ್ರವರಿ ಮಾಹೆಯಲ್ಲಿ ಸುಮಾರು ೪.೯೫ ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದ ೬೦೦ ಮೀಟರ್ ಉದ್ದದ ಜಲ್ಲಿ ಮಣ್ಣು ರಸ್ತೆ ಕಾಮಗಾರಿಯು ಇತ್ತೀಚೆಗೆ ಬಿದ್ದ ಮಳೆಗೆ ಕೊಚ್ಚಿಕೊಂಡು ಹೋಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಒಂದೇ ಮಳೆಗೆ ರಸ್ತೆ ಕೊಚ್ಚಿ ಹೋಗಲು ಕಾರಣ ಮೊದಲು ರಸ್ತೆ ಮಾಡಿ ನಂತರ ಅದರ ಮೇಲೆ ಚರಂಡಿ ಮಾಡಿರುವುದಾಗಿದೆ. ಅಲ್ಲದೆ ಇಂಜಿನಿಯರ್ ಕಾಮಗಾರಿ ಗುಣಮಟ್ಟ ವೀಕ್ಷಿಸಿದರಾದರೂ ಗುಣಮಟ್ಟ ಹಾಗೂ ವೈಜ್ಞಾನಿಕವಾಗಿ ಮಾಡುವಂತೆ ತಿಳಿಸದೆ ಜಾಣ ಕುರುಡು ಪ್ರದರ್ಶಿಸಿದ್ದಾರೆ.
ಪರಿಣಾಮ ಒಂದೇ ಮಳೆಗೆ ಜಲ್ಲಿ ಎದ್ದು ಕಾಣುತ್ತಿದ್ದು, ಮಣ್ಣೆಲ್ಲಾ ಕೊಚ್ಚಿ ಹಳ್ಳ ಸೇರಿದೆ. ಅಲ್ಲದೆ ಕೇವಲ ೨ ತಿಂಗಳಲ್ಲೇ ಸರ್ಕಾರದ ಲಕ್ಷಾಂತರ ರೂ. ನೀರು ಪಾಲಾಗಿದೆ. ಈಗ ರಸ್ತೆಯಲ್ಲಿ ಓಡಾಡುವುದು ದುಸ್ತರವಾಗಿದ್ದು, ಸಾರ್ವಜನಿಕರು ಗುತ್ತಿಗೆದಾರನಿಗೆ ಹಾಗೂ ಇಂಜಿನಿಯರ್‌ಗೆ ಹಿಡಿಶಾಪ ಹಾಕಿ ಓಡಾಡುವಂತಾಗಿದೆ.
ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಕೊಚ್ಚಿ ಹೋಗಿರುವ ರಸ್ತೆಯನ್ನು ಸರಿಪಡಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.