(ಸಂಜೆವಾಣಿ ವಾರ್ತೆ)
ಅಥಣಿ :ಜೂ.30: ಸರ್ಕಾರ ಬಡ ಮಕ್ಕಳ ಉತ್ತಮ ವಿದ್ಯಾಭ್ಯಾಸಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಕಟ್ಟಡದ ನಿರ್ಮಾಣ ಮಾಡಿದ್ದು ಈ ಕಟ್ಟಡದ ಕಾಮಗಾರಿಯನ್ನು ಎಸ್ಟಿಮೆಂಟ್ ತರಿಸಿಕೊಂಡು ಎಸ್ಟಿಮೇಟ್ ಪ್ರಕಾರ ಪೂರ್ಣವಾಗಿದೆಯೋ ಇಲ್ಲವೋ ನನಗೆ ವರದಿ ನೀಡಿ ಅದನ್ನು ಪರಿಶೀಲಿಸುವವರೆಗೆ ಕಟ್ಟಡ ಹಸ್ತಾಂತರ ಮಾಡಿಕೊಳ್ಳಬೇಡಿ ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು,
ಅವರು ತಾಲೂಕಿನ ತೆಲಸಂಗ ಗ್ರಾಮದಲ್ಲಿ ನಿರ್ಮಾಣವಾಗಿರುವ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿ, ಇಲ್ಲಿಯ ಮಕ್ಕಳಿಗೆ ಅನಾನುಕೂಲ ಆಗಬಾರದು ಎಂಬ ಉದ್ದೇಶದಿಂದ ಈಗ ತಾತ್ಕಾಲಿಕವಾಗಿ ಚಾಲನೆ ನೀಡಿದ್ದೇನೆ. ಈಗಾಗಲೇ ಶೇ 80 ರಷ್ಟು ಬಿಲ್ ಪಾಸ್ ಮಾಡಿದ್ದಾರೆ. ಕಳಪೆ ಕಾಮಗಾರಿ ಅಂತ ಗ್ರಾಮಸ್ಥರ ದೂರುಗಳಿದ್ದರೂ ಕೂಡಾ 23 ಕೋಟಿ ವೆಚ್ಚದ ಕಾಮಗಾರಿಯ ಬಗ್ಗೆ ನಿರ್ಲಕ್ಷ್ಯ ತೋರಿದ್ದು ಸರಿಯಲ್ಲ. ಇದನ್ನು ನಾನು ಸಹಿಸುವುದೂ ಇಲ್ಲ. ಉಳಿದ ಶೇ.20 ರಷ್ಟು ಬಿಲ್ ಕಾಮಗಾರಿ ಕೊನೆಗೊಳ್ಳುವ ವರೆಗೆ ತಡೆ ಹಿಡಿದು ಪೂರ್ಣ ಕೆಲಸ ಮಾಡಿಕೊಳ್ಳಿ ಎಂದರು,
ಅಥಣಿಯಲ್ಲಿ ಕೇಂದ್ರಿಯ ವಿದ್ಯಾಲಯ ಮಂಜೂರು ಮಾಡುವ ನಿಟ್ಟಿನಲ್ಲಿ ಅನೇಕ ಬಾರಿ ದೆಹಲಿಗೆ ಹೋಗಿದ್ದೆ ಆದರೆ ಇತ್ತೀಚೆಗೆ ಬಿಇಒ ಸೇರಿದಂತೆ ಕೆಲ ಅಧಿಕಾರಿಗಳು ಕೇಂದ್ರಿಯ ವಿದ್ಯಾಲಯ ತೆರೆಯಲು ಅಥಣಿ ಅನ್ ಫಿಟ್ ಅಂತ ವರದಿ ಕಳುಹಿಸಿದ್ದು, ದುರಾದೃಷ್ಠಕರ ಸಂಗತಿ, ಅನ್ ಫಿಟ್ ಅಂತ ವರದಿ ಕಳಿಸೋಕೆ ಅಥಣಿ ಸಮುದ್ರ ದಂಡೆಯಲ್ಲಿದೆಯೇ ಅನ್ ಫಿಟ್ ಅಂತ ಹೇಗೆ ವರದಿ ಕಳುಹಿಸಿದರು, ಎಂದು ಪ್ರಶ್ನಿಸಿದರು,
ಉಚಿತ ಅಕ್ಷರದಾಸೋಹ ನಡೆಸಿದ ಮಹಾತ್ಮರ ನಾಡಿನಲ್ಲಿ ದುರುದ್ದೇಶದಿಂದ ಕೇಂದ್ರಿಯ ವಿದ್ಯಾಲಯ ತೆರೆಯಲು ಅಥಣಿ ಅನ್ ಫಿಟ್ ಅಂತ ಹೇಳುವ ಇಂತಹ ಅಧಿಕಾರಿಗಳು ಇರುವುದು ನಮ್ಮ ದುರಾದೃಷ್ಟ ಬಿಇಒ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು,
ಈ ವಸತಿ ಶಾಲೆಯ ಕಟ್ಟಡ ಕಾಮಗಾರಿ ವಿಷಯದಲ್ಲಿ ಪಾರದರ್ಶಕ ಇಲ್ಲದಿದ್ದರೆ ಕ್ರಮ ಕಟ್ಟಿಟ್ಟಬುತ್ತಿ ಎಂದು ಎಚ್ಚರಿಸಿದರು,
ಪಟ್ಟಣದ ಜನರ ಬಹುವರ್ಷಗಳ ಬೇಡಿಕೆಯಾದ ಪ್ರೌಢಶಾಲೆ ಸ್ಥಾಪನೆ ಮಾಡಬೇಕೆಂಬ ಉದ್ದೇಶದಿಂದ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಮತ್ತು ಶಿಕ್ಷಣ ಸಚಿವರ ಜೊತೆ ಸಮಾಲೋಚನೆ ನಡೆಸಿ ಮುಂಬರುವ ದಿನಗಳಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಭಿಸ ಲಾಗುವುದು. ಪಶು ವೈದ್ಯಕೀಯ ಮಹಾವಿದ್ಯಾಲಯ, ಕೃಷಿ ವಿಶ್ವವಿದ್ಯಾಲಯ, ಅಥಣಿ ಪಟ್ಟಣದಲ್ಲಿ ಆರ್‍ಟಿಒ ಕಚೇರಿ, ಹೀಗೆ ಜಿಲ್ಲಾ ಕೇಂದ್ರದಲ್ಲಿನ ಕೆಲಸಗಳು ಗ್ರಾಮೀಣ ಮಟ್ಟದಲ್ಲಿ ತಂದಿರುವುದು ನನಗೆ ಹೆಮ್ಮೆ ತಂದಿದೆ ಎಂದರು.
ಈ ವೇಳೆ ಬೆಳಗಾವಿ ಸಮಾಜ ಕಲ್ಯಾಣ ಇಲಾಖೆ ಅಪರ್ ಆಯುಕ್ತರ ಕಲ್ಲೇಶ ಬಿ. ತಾಲೂಕಾ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ ಪಾಟೀಲ, ಪ್ರಾಂಶಪಾಲೆ ರೇಣುಕಾ ಹೊಸಮನಿ, ತೆಲಸಂಗ ಬ್ಲಾಕ್ ಅಧ್ಯಕ್ಷ ಶ್ರೀಕಾಂತ ಪೂಜಾರಿ, ಕಾಂಗ್ರೆಸ್ ಮುಖಂಡರಾದ ಶಿವು ಗುಡ್ಡಾಪೂರ, ಚಂದ್ರಶೇಖರ್ ನ್ಯಾಮಗೌಡ, ಸುರೇಶ ಮಾಯಣ್ಣವರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಕಳಪೆ ಕಾಮಗಾರಿ ಗ್ರಾಮಸ್ಥರಿಂದ ಕ್ರಮಕ್ಕೆ ಒತ್ತಾಯ :-
ಕಟ್ಟಡದಲ್ಲಿ ಬಿರುಕು ಕಾಣಿಸಿಕೊಂಡಿದೆ. ಗೋಡೆ ಗಿಲಾಯ್ ಫಿನಿಸಿಂಗ್, ಫ್ಲಮಿಂಗ್, ಕರೆಂಟ್ ಫಿಟಿಂಗ್, ಪರಸಿ ಜೋಡಣೆ, ಬಣ್ಣ, ಕಟ್ಟಿಗೆಯ ಬಾಗಿಲು ಕಿಡಕಿ, ರಸ್ತೆಯಲ್ಲಿ ಬಿರುಕು, ಬಾಸ್ಕೇಟ್ ಬಾಲ್ ಮೈದಾನದಲ್ಲಿ ಬಿರುಕು, ಅವೈಜ್ಞಾನಿಕ ರಂಗ ಮಂಟಪ್, ಬಾತ್ ರೂಮ್, ಶೌಚಾಲಯ, ಕೊಠಡಿಗಳ ಆಸಿಡ್ ಕ್ಲಿನಿಂಗ್, ಖೋ ಖೋ, ವಾಲಿಬಾಲ್, ಟೇನಿಸ್ ಆಟದ ಮೈದಾನ ಹೀಗೆ ಕಳಪೆ ಕಾಮಗಾರಿ ಕನ್ನಡಿಯಂತೆ ಕಾಣುತ್ತಿದ್ದರೂ 80 ರಷ್ಟು ಬಿಲ್ ಪಾಸ್ ಪಾಸ ಮಾಡಿದ ಅಧಿಕಾರಿ ಮತ್ತು ಇಂಜನಿಯರ್ ಮೇಲೆ ತನಿಖೆ ನಡೆಸಿ ಕ್ರಮಕೈಗೊಳ್ಳಬೇಕು. ಅಲ್ಲದೆ ರನಿಂಗ್ ಟ್ರ್ಯಾಕ್ ಮೈದಾನ ನಿರ್ಮಾಣ ಕಾಮಗಾರಿ ಬಗ್ಗೆ ಸೂಕ್ತ ತನಿಖೆಗೆ ಶಾಸಕ ಲಕ್ಷ್ಮಣ ಸವದಿ ಅವರನ್ನು ಗ್ರಾಮಸ್ಥರು ಒತ್ತಾಯಿಸಿದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕ ಸವದಿ ಅಧಿಕಾರಿಗಳಿಗೆ ಬಿಲ್ ತಡೆ ಹಿಡಿಯುವಂತೆ ಸೂಚಿಸಿದರು.