ಕಳಪೆ ಕಾಮಗಾರಿ ತನಿಖೆಗೆ ಆಗ್ರಹ: ಅತಿವೃಷ್ಟಿ ಹಾನಿ ಪರಿಹಾರಕ್ಕೆ ಒತ್ತಾಯ

ಕಲಬುರಗಿ,ಜು.19: ದಕ್ಷಿಣ ಕ್ಷೇತ್ರದಲ್ಲಿ ಬರುವ ರಸ್ತೆ, ಶಾಲಾ ಕಟ್ಟಡ ಕಳಪೆ ಕಾಮಗಾರಿಗಳ ಕುರಿತು ತನಿಖೆಗೆ ಒಪ್ಪಿಸುವಂತೆ ಹಾಗೂ ಅತಿವೃಷ್ಟಿಯಿಂದ ಹಾನಿಗೀಡಾದ ಸಂತ್ರಸ್ತರಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು ಎಂದು ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ಅಲ್ಲಮಪ್ರಭು ಪಾಟೀಲ್ ಅವರು ಒತ್ತಾಯಿಸಿದರು.
ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅತಿವೃಷ್ಟಿಯಿಂದ ದಕ್ಷಿಣ ಕ್ಷೇತ್ರದಲ್ಲಿ ವ್ಯಾಪಕ ಪ್ರಮಾಣದಲ್ಲಿ ಹಾನಿಯಾಗಿದೆ. ಅನೇಕರು ಮನೆಗಳನ್ನು ಕಳೆದುಕೊಂಡಿದ್ದಾರೆ. ಬೆಳೆಗಳಿಗೆ ಹಾನಿಯಾಗಿದೆ. ಕೂಡಲೇ ಸಂತ್ರಸ್ತರ ನೆರವಿಗೆ ಸರ್ಕಾರವು ಧಾವಿಸಬೇಕು ಎಂದು ಆಗ್ರಹಿಸಿದರು.
ಈ ಹಿಂದೆ ಕೋವಿಡ್‍ನಿಂದ ತತ್ತರಿಸಿದ ರೈತರು ಹಾಗೂ ಜನಸಾಮಾನ್ಯರು ಈಗ ಅತಿವೃಷ್ಟಿಯಿಂದ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಕೂಡಲೇ ಪರಿಹಾರ ಕಲ್ಪಿಸುವ ಮೂಲಕ ಸಂತ್ರಸ್ತರಿಗೆ ನ್ಯಾಯ ಕೊಡಬೇಕು ಎಂದು ಅವರು ಒತ್ತಾಯಿಸಿದರು.
ಇನ್ನು ದಕ್ಷಿಣ ಕ್ಷೇತ್ರದಲ್ಲಿ ಅನೇಕ ಕಾಮಗಾರಿಗಳು ಕಳಪೆಯಾಗಿವೆ. ಅಕ್ರಮ, ಅವ್ಯಹಾರ ಆಗಿವೆ ಎಂದು ಗಂಭೀರ ಆರೋಪ ಮಾಡಿದ ಅವರು, ಹುಣಸಿಹಡಗಿಲ್ ಗ್ರಾಮದಲ್ಲಿ ಸರ್ಕಾರಿ ಪ್ರೌಢಶಾಲೆಯ ಕಟ್ಟಡವು ಸಂಪೂರ್ಣ ಕಳಪೆ ಮಟ್ಟದ್ದಾಗಿದೆ. ಮಳೆಯಿಂದಾಗಿ ಶಾಲೆಯೊಳಗೆ ಮಳೆ ನೀರು ಸೋರುತ್ತಿದೆ. ಹೀಗಾಗಿ ಕಳಪೆ ಮಟ್ಟದ ಕಾಮಗಾರಿ ಮತ್ತು ಅವ್ಯವಹಾರ ಆಗಿದೆ ಎಂದು ದೂರಿದರು.
ಮೇಳಕುಂದಾ (ಕೆ) ಮತ್ತು ಸಾವಳಗಿ ರೈಲು ನಿಲ್ದಾಣಕ್ಕೆ ನಿರ್ಮಿಸಿದ ರಸ್ತೆ ಸಹ ಒಂದೇ ತಿಂಗಳಲ್ಲಿ ಹಾಳಾಗಿ ಹೋಗಿದೆ. ಕಳಪೆ ಮಟ್ಟದ ಕಾಮಗಾರಿಗೆ ಇದು ತಾಜಾ ನಿದರ್ಶನವಾಗಿದೆ ಎಂದು ಆರೋಪಿಸಿದ ಅವರು, ಅಫಜಲಪುರ ಹಾಗೂ ಮಳನಿ ಮಾರ್ಗದ ರಸ್ತೆಯು ರಸ್ತೆ ಸರಿಯಾಗಿದೆ. ಆದಾಗ್ಯೂ, ಆ ರಸ್ತೆ ಹೆಸರಿನಲ್ಲಿ ಟೆಂಡರ್ ಕರೆಯುವ ಮೂಲಕ ಹಣ ದೋಚುವ ಸಂಚು ಮಾಡಲಾಗುತ್ತಿದೆ. ಕೂಡಲೇ ಇದನ್ನು ತಡೆಯಬೇಕು ಎಂದು ಅವರು ಒತ್ತಾಯಿಸಿದರು.
ಆಡಳಿತ ಪಕ್ಷದ ಶಾಸಕರು ಹಾಗೂ ಸಚಿವರ ಕುಮ್ಮಕ್ಕಿನಿಂದಲೇ ಇಂತಹ ಅಕ್ರಮ, ಅವ್ಯವಹಾರ ಹಾಗೂ ಕಳಪೆ ಕಾಮಗಾರಿಯಾಗುತ್ತಿದ್ದು, ಕೂಡಲೇ ತನಿಖೆಗೆ ಒಪ್ಪಿಸಬೇಕು ಎಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಲಿಂಗರಾಜ್ ತಾರಫೈಲ್, ಲಿಂಗರಾಜ್ ಕಣ್ಣಿ ಮುಂತಾದವರು ಉಪಸ್ಥಿತರಿದ್ದರು.