ಕಳಪೆ ಕಾಮಗಾರಿ ಗುಂಡಿಯಲ್ಲಿ ಸಿಲುಕಿದ ಲಾರಿ

ಸಿರಾ, ಜು. ೩೦- ನಗರಸಭೆ ಕಳಪೆ ಕಾಮಗಾರಿ ಹಾಗೂ ಬೇಜವಾಬ್ದಾರಿಯಿಂದಾಗಿ ಲಾರಿಯೊಂದು ರಸ್ತೆಯಲ್ಲಿರುವ ಗುಂಡಿಯಲ್ಲಿ ಸಿಲುಕಿ ಲಾರಿಯನ್ನು ಹೊರ ತೆಗೆಯಲು ಚಾಲಕ ಹಾಗೂ ಸ್ಥಳೀಯರು ಪರದಾಡಿದ ಘಟನೆ ನಗರದಲ್ಲಿ ನಡೆದಿದೆ.
ರಾತ್ರಿ ಸಿರಾದಲ್ಲಿ ಗುಡುಗು ಮಿಂಚು ಸಹಿತ ಭರ್ಜರಿ ಮಳೆ ಬಿದ್ದಿದ್ದು, ಈ ಸಂದರ್ಭದಲ್ಲಿ ಪೈಪ್‌ಗಳನ್ನು ತುಂಬಿಕೊಂಡು ಬಂದ ಮಹಾರಾಷ್ಟ್ರ ಮೂಲದ ಲಾರಿ ನಗರಸಭೆ ಎದುರೇ ಇರುವ ಮುಖ್ಯರಸ್ತೆಯಲ್ಲಿ ಸಾಗುತ್ತಿರುವ ರಸ್ತೆ ಕುಸಿದು, ಚಾಲಕನ ಕಡೆಯ ಮುಂದಿನ ಮತ್ತು ಹಿಂದಿನ ಚಕ್ರಗಳು ಸಿಲುಕಿಕೊಂಡು ಸಾಕಷ್ಟು ಯಾತನೆ ಪಡುವಂತಾಯಿತು. ಬೆಳಿಗ್ಗೆ ಕ್ರೇನ್ ಸಹಾಯದಿಂದ ಮೇಲಕ್ಕೆತ್ತಿ ಸಂಕಷ್ಟದಿಂದ ಪಾರು ಮಾಡಲಾಯಿತು.
ಗುಂಡಿಯಲ್ಲಿ ಸಿಲುಕಿಕೊಂಡಿದ್ದ ಲಾರಿಯನ್ನು ಹೊರ ತೆಗೆಯಲು ಪಟ್ಟ ಹರಸಾಹಸವನ್ನು ಕಂಡ ನೆರೆದಿದ್ದ ಜನ ನಗರಸಭೆ ಕಾಮಗಾರಿಗಳನ್ನು ಕಂಡು ಹಿಡಿಶಾಪ ಹಾಕುತ್ತಿದ್ದು, ತಮ್ಮ ಕಚೇರಿಯ ಮುಂದೆಯೇ ಹೀಗೆ ಇದ್ದರೆ, ಇನ್ನು ನಗರದ ಒಳಗೆ ಹೇಗೆಲ್ಲ ರಸ್ತೆಗಳು ಇವೆ ಎಂಬುದರ ಬಗ್ಗೆ ಸಾರ್ವಜನಿಕ ಚರ್ಚೆಗಳು ಮೇಳೈಸುತ್ತಿದ್ದವು.