ಕಳಪೆ ಕಾಮಗಾರಿ : ಕ್ರಮ ಜರುಗಿಸುವಂತೆ ಒತ್ತಾಯ

ಕೆ.ಆರ್.ಪೇಟೆ.ಫೆ.08: ಕಳಪೆ ಕಾಮಗಾರಿಯಿಂದ ಸೇತುವೆಯೊಂದು ನಿರ್ಮಾಣವಾದ ಕೆಲವೇ ದಿನಗಳಲ್ಲಿ ಕುಸಿಯುವ ಹಂತ ತಲುಪಿದ್ದು ಗುತ್ತಿಗೆದಾರ ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸಾಮಾಜಿಕ ಹೋರಾಟಗಾರ ಜಿ.ಆರ್.ಜಯಣ್ಣ ಒತ್ತಾಯ ಮಾಡಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಜಯಣ್ಣ ಮಂದಗೆರೆ ಬಲದಂಡೆ ನಾಲೆಯ ಸರಪಳಿ 46.50 ಕಿ.ಮೀ.ನಲ್ಲಿ ಮುದ್ಲಾಪುರ- ಮಾವಿನಕೆರೆ ಮುಖ್ಯ ರಸ್ತೆಯಿಂದ ಸೋಮನಹಳ್ಳಿ ವ್ಯಾಪ್ತಿಯ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ತಾಲೂಕಿನ ಬೂಕನಕೆರೆ ಹೋಬಳಿಯ ಮಾವಿನಕೆರೆ ಗ್ರಾಮದ ಬಳಿ ಬಲದಂಡೆ ನಾಲೆಗೆ ಸುಮಾರು 35 ಲಕ್ಷ ವೆಚ್ಚದಲ್ಲಿ ರಸ್ತೆ ಸೇತುವೆ ನಿರ್ಮಾಣ ಮಾಡಿದ್ದು ಕಾಮಗಾರಿ ಮಾಡಿದ ಕೆಲವೇ ದಿನಗಳಲ್ಲಿ ಸೇತುವೆಯ ಒಂದು ಭಾಗದಲ್ಲಿ ಕಾಂಕ್ರೀಟ್ ಫ್ಲ್ಯಾಟ್ ಕನಿಷ್ಟ ಒಂದು ಅಡಿಯಷ್ಟು ಕೆಳಕ್ಕೆ ಕುಸಿದಿದ್ದು, ಈ ರೀತಿ ಕುಸಿದಿರುವ ಕಳಪೆ ಕಾಮಗಾರಿಯನ್ನು ಗೌಪ್ಯವಾಗಿಡುವ ಸಲುವಾಗಿ ಕಾಂಕ್ರೀಟ್ ಸ್ಲ್ಯಾಬ್ ಕೆಳಭಾಗಕ್ಕೆ ಕಬ್ಬಿಣದ ಗಾರ್ಡರ್ಗಳನ್ನು ಅಳವಡಿಸಿ ತಾತ್ಕಾಲಿಕವಾಗಿ ತಡೆಯೊಡ್ಡಲಾಗಿದೆ
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಕಬ್ಬಿಣವನ್ನು ವಿನ್ಯಾಸಕ್ಕೆ ತಕ್ಕಂತೆ ಜೋಡಿಸದೇ, ಅಲ್ಲಲ್ಲಿ ತುಂಡು ರಾಡ್‍ಗಳನ್ನು ಜೋಡಿಸಿರುವುದು, ಮತ್ತು ಕಳಪೆ ಗುಣಮಟ್ಟದ ಕಾಮಗಾರಿಯಿಂದ ಕುಸಿದಿರುವುದು ಕಂಡು ಬಂದಿರುತ್ತದೆ. ಸ್ಲ್ಯಾಬ್ ಕೆಳಭಾಗದಲ್ಲಿ ಕಾಂಕ್ರೀಟ್ ಬಹುತೇಕ ಕಿತ್ತು ಹೋಗಿದ್ದು, ಸ್ಲ್ಯಾಬಿನ ಕಬ್ಬಿಣದ ಸರಳುಗಳು ಎದ್ದು ಕಾಣುತ್ತಿವೆ. ತಾತ್ಕಾಲಿಕವಾಗಿ ಅಳವಡಿಸಿರುವ (ಸಪೆÇೀರ್ಟ್ ಗಾರ್ಡರ್) ಕಬ್ಬಿಣದ ಗಾರ್ಡರ್ ಮೇಲೆ ಒಂದು ಭಾಗದ ಸೇತುವೆಯ ಸ್ಲ್ಯಾಬ್ ಆತುಕೊಂಡಂತೆ ತಾತ್ಕಾಲಿಕ ಆಶ್ರಯ ಪಡೆದಂತೆ ಕಾಣುತ್ತಿದೆ ಎಂದಿರುವ ಜಯಣ್ಣ ಇದರಿಂದ
ಬಾರಿ ಅಪಾಯ ಎದುರಾಗುವ ಸಂಭವವಿದ್ದು, ಅಷ್ಟರೊಳಗೆ ಈ ರಸ್ತೆಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸಂಚಾರ ನಿರ್ಬಂಧಿಸುವುದು ಸಾರ್ವಜನಿಕ ಹಿತಾದೃಷ್ಟಿಯಿಂದ ಅತ್ಯಾವಶ್ಯಕವಾಗಿದೆ ಎಂದಿದ್ದಾರೆ.
ಈ ಸೇತುವೆಯು ಇಷ್ಟೊಂದು ಭಾರಿ ಪ್ರಮಾಣದಲ್ಲಿ ಅಪಾಯದ ಅಂಚಿನಲ್ಲಿದ್ದನ್ನು ಕಾವೇರಿ ನೀರಾವರಿ ನಿಗಮದ ನಂ. 3 ಹೇಮಾವತಿ ಎಡದಂಡೆ ನಾಲಾ ವಿಭಾಗ ಕಛೇರಿಯ ಎಕ್ಸಿಕ್ಯುಟಿವ್ ಇಂಜಿನಿಯರ್ ಶ್ರೀಯುತ ಕಿಜಾರ್ ಅಹಮದ್ ಮತ್ತು ಕಾಮಗಾರಿಯನ್ನು ಅನುಷ್ಠಾನಗೊಳಿಸಿದ ನಂ. 5 ಹೇಮಾವತಿ ಎಡದಂಡೆ ನಾಲಾ ಉಪ ವಿಭಾಗ ಕಛೇರಿಯ ಸಹಾಯಕ ಎಕ್ಸಿಕ್ಯುಟಿವ್ ಇಂಜಿನಿಯರ್ ಶ್ರೀಯುತ ಆನಂದ್ ರವರು ಕಾಮಗಾರಿ ಉತ್ತುಮವಾಗಿದೆ ಎಂದು ದೃಢೀಕರಿಸಿ ಅಂತಿಮ ಬಿಲ್ ತಯಾರಿಸಿದ್ದಾದರೂ ಹೇಗೆ, ಈ ಕಾಮಗಾರಿ ಉತ್ತಮವಾಗಿದೆ ಎಂದು ಗುಣಮಟ್ಟ ಪರೀಕ್ಷಾ ವರದಿಯನ್ನು ನೀಡಿದ್ದಾದರೂ ಹೇಗೆ?, ಮತ್ತು ಕೆಲಸದ ಮುಕ್ತಾಯ ದೃಢೀಕರಣ ಪತ್ರಕ್ಕೆ ಸಕ್ಷಮ ಪ್ರಾಧಿಕಾರಿಯವರು ಈಗಾಗಲೇ ಮೇಲು ರುಜು ಮಾಡಿದ್ದು, ಅಕ್ರಮವನ್ನು ಮರೆಮಾಚಿದ್ದಾದರೂ ಏಕೆ ಎಂಬುದು ತೀರಾ ವಿಷಾದನೀಯ ವಿಚಾರವಾಗಿದ್ದು, ಈ ಎಲ್ಲಾ ಅಧಿಕಾರಿ ವರ್ಗದವರು ಷಾಮೀಲಾಗಿ ಮಸಣದ ಹೆಬ್ಬಾಗಿಲಿನಂತಿರುವ ಸೇತುವೆಯ ಅಪಾಯವನ್ನು ಮರೆಮಾಚಿ ಸಾರ್ವಜನಿಕರ ಪ್ರಾಣ ಹಾನಿ ಮಾಡುವ ಉದ್ದೇಶಿತ ಕ್ರಮವೇ ಸರಿ ಎಂದು ಆರೋಪಿಸಿದ್ದಾರೆ.
ಇದಕ್ಕೆ ಸಂಭಂದಿಸಿದಂತೆ ಗುತ್ತಿಗೆದಾರರು ಮತ್ತು ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಅಪರ ಮುಖ್ಯ ಕಾರ್ಯದರ್ಶಿ ಜಲಸಂಪನ್ಮೂಲ ಇಲಾಖೆ, ವ್ಯವಸ್ಥಾಪಕ ನಿರ್ದೇಶಕರು ಕಾವೇರಿ ನೀರಾವರಿ ನಿಗಮ,ಮುಖ್ಯ ಇಂಜಿನಿಯರ್ ಕಾವೇರಿ ನೀರಾವರಿ ನಿಗಮ,ಜಿಲ್ಲಾಧಿಕಾರಿಗಳು ಮಂಡ್ಯ ಇವರುಗಳಿಗೆ ದೂರು ಸಲ್ಲಿಸಲಾಗಿದೆ ಎಂದು ಜಯಣ್ಣ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.