ಕಳಪೆ ಕಾಮಗಾರಿ : ಕ್ರಮಕ್ಕೆ ಆಗ್ರಹ

ಕೋಲಾರ,ಜ,೧೧- ಅಮೃತ್‌ಸಿಟಿ ಯೋಜನೆಯಡಿ ಬಂದಿರುವ ೭೦ ಕೋಟಿ ಅನುದಾನದಡಿ ಶೇ.೨೦ರಷ್ಟೂ ಕಾಮಗಾರಿ ಮಾಡಿಲ್ಲ. ಆದರೂ ಉಳಿದ ಕಾಮಗಾರಿಗಳಿಗೆ ಯಾವುದೇ ಕಾರಣಕ್ಕೂ ಅನುಮೋದನೆ ನೀಡಬಾರದೆಂದು ನಗರಸಭೆ ಸದಸ್ಯರು ಸರ್ವಾನುಮತದಿಂದ ತೀರ್ಮಾನ ಕೈಗೊಂಡರು.
ನಗರಸಭೆ ಕಾರ್ಯಾಲಯದಲ್ಲಿ ಶ್ವೇತಾ ಶಬರೀಶ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗುತ್ತಿದ್ದಂತೆಯೇ ಹಿರಿಯ ಸದಸ್ಯ ಬಿ.ಎಂ.ಮುಬಾರಕ್, ಅಸಮಾಧಾನ ವ್ಯಕ್ತಪಡಿಸಿ ಕಳಪೆ ವಸ್ತುಗಳನ್ನು ಬಳಸಿ ಕಾಮಗಾರಿಗಳು ಮಾಡಿರುವುದು ಮೂರೇ ದಿನಕ್ಕೆ ಹಾಳಾಗುತ್ತಿದೆ ಎಂದು ಕಿಡಿ ಕಾರಿದರು,
ಇದರ ಬಗ್ಗೆ ಸಾರ್ವಜನಿಕರು ಆಯಾ ವಾರ್ಡ್‌ಗಳ ಸದಸ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಮೃತ್‌ಸಿಟಿ ಯೋಜನೆಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಅಧಿಕಾರಿಗಳ ಸಭೆ ನಡೆಸಿ ಮುಂದಿನ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಗರಸಭೆ ಸದಸ್ಯ ಸೂರಿ ಮಾತನಾಡಿ, ವಿಶ್ವ ಯೋಗ ದಿನಾಚರಣೆಗೆ ೨೦ ಲೀಟರ್ ಸಾಮರ್ಥ್ಯದ ೧೦೦೦ ಕ್ಯಾನ್ ಸರಬರಾಜು ಮಾಡಿರುವುದಕ್ಕೆ ಸಂಬಂಧಿಸಿದಂತೆ ೮೫ ಸಾವಿರ ಬಿಲ್ ಪಾವತಿಗಾಗಿ ಅನುಮೋದನೆಗೆ ಬಂದಿದೆ ೪೦ ಸಾವಿರ ರೂ ಮೌಲ್ಯದ ಬದಲಾಗಿ ೮೫ ಸಾವಿರ ಬಿಲ್ ಕೊಡಲಾಗಿದೆ ಇದರ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಹಾಗೂ ಸರಬರಾಜುದಾರರಿಂದಲೇ ಹೆಚ್ಚುವರಿಯಾಗಿ ನೀಡಿರುವ ಹಣ ವಸೂಲಿ ಮಾಡಬೇಕೆಂದು ಪಟ್ಟುಹಿಡಿದರು.
ಸದಸ್ಯ ರಾಕೇಶ್ ಮಾತನಾಡಿ, ನಗರಸಭೆ ವ್ಯಾಪ್ತಿಗೆ ಬರುವ ಕೋಲಾರಮ್ಮ ಪಂಪ್ ಹೌಸ್‌ನಲ್ಲಿ ಯಂತ್ರೋಪಕರಣಗಳ ಬಿಡಿ ಭಾಗಗಳ ವಿತರಣೆಯಲ್ಲಿ ಹಗಲು ದರೋಡೆ ನಡೆಯುತ್ತಿದ್ದು, ಪಂಪು ಮೋಟರ್‌ಗಳು, ಪೈಪುಗಳು, ಕೇಬಲ್‌ಗಳು ಎಷ್ಟಿವೆ ಎನ್ನುವ ಮಾಹಿತಿಯೇ ಇಲ್ಲ ಎಂದು ಆರೋಪಿಸಿದರು.
ಇದಕ್ಕೆ ಧ್ವನಿಗೂಡಿಸಿದ ಬಿ.ಎಂ.ಮುಬಾರಕ್, ಜಿಲ್ಲೆಯಾದ್ಯಂತ ಕೆರೆಗಳು ತುಂಬಿದ್ದರೂ ನಗರಕ್ಕೆ ನೀರು ಕೊಡುವಂತಹ ವಿಫುಲ ಅವಕಾಶಗಳಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪಂಪ್‌ಹೌಸ್‌ಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ಸಾರ್ವಜನಿಕರಿಗೆ ನೀರು ಕೊಡುವುದರಲ್ಲಿಯೂ ಲೂಟಿ ಮಾಡಲಾಗುತ್ತಿದೆ ಎಂದು ದೂರಿದರು.
ಸದಸ್ಯ ಅಂಬರೀಶ್ ಮಾತನಾಡಿ, ನಗರದ ಬಹುತೇಕ ಕಡೆಗಳಲ್ಲಿ ಯುಜಿಡಿಯಲ್ಲಿ ಹುಳಗಳು ಕಂಡುಬರುತ್ತಿವೆ. ಈ ಬಗ್ಗೆ ನಗರಸಭೆ ಆರೋಗ್ಯ ನಿರೀಕ್ಷಕರ ಗಮನಕ್ಕೆ ಹಲವಾರು ಬಾರಿ ತಂದಿದ್ದರೂ ಯಾವುದೇ ರೀತಿಯ ಕ್ರಮಕೈಗೊಂಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.
ನಗರದ ಟೇಕಲ್ ರಸ್ತೆಯಲ್ಲಿರುವ ಮಕ್ಕಳ ಉದ್ಯಾನವನಕ್ಕೆ ಅಂಬೇಡ್ಕರ್ ಹೆಸರಿಡುವಂತೆ ತೀರ್ಮಾನಿಸಲಾಗಿದೆ. ನಾಮಫಲಕ ಹಾಕಿ ಕಾರ್ಯಕ್ರಮ ಉದ್ಘಾಟನೆಗೆ ಯಾವುದೇ ಅಡೆತಡೆ ಇಲ್ಲದಂತೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ವೇಳೆ ಧ್ವನಿಗೂಡಿಸಿದ ಸದಸ್ಯ ರಾಕೇಶ್, ಕಿತ್ತಾಟಗಳಿಲ್ಲದೆ ವ್ಯವಸ್ಥಿತವಾಗಿ ಕಾಯಕ್ರಮ ಉದ್ಯಾನವನದಲ್ಲೇ ನಡೆಸಬೇಕು, ಮಹಾನ್ ವ್ಯಕ್ತಿಗೆ ಅವಮಾನವಾಗದಂತೆ
ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸದಸ್ಯ ಪ್ರಸಾದ್‌ಬಾಬು ಮಾತನಾಡಿ, ನಗರಸಭೆಯ ಹಿಂದಿನ ರಾಜ್ಯ ಸರಕಾರವು ನಗರಸಭೆ ನೂತನ ಕಟ್ಟಡ ನಿರ್ಮಾಣಕ್ಕೆ ೫ ಕೋಟಿರೂ ಅನುದಾನ ಬಿಡುಗಡೆಗೊಳಿಸಿತ್ತು. ಆದರೆ, ಈಗಿನ ಬಿಜೆಪಿ ಸರಕಾರ ವಾಪಸ್ಸು ಪಡೆದುಕೊಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.