(ಸಂಜೆವಾಣಿ ವಾರ್ತೆ)
ಹುಮನಾಬಾದ್: ಸೆ.21:ತಾಲೂಕಿನ ಗಡವಂತಿ ಸರ್ಕಾರದ ಯೋಜನೆಯಲ್ಲಿ ನಡೆಯುವ ಕಾಮಗಾರಿಗಳು ಕಳಪೆ ಕಾಮಗಾರಿ ಕೈಗೊಂಡರೆ ಸಹಿಸಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ ಎಂದು ಶಾಸಕ ಡಾ. ಸಿದ್ದು ಪಾಟೀಲ್ ಹೇಳಿದರು.
ತಾಲೂಕಿನ ಮಾಣಿಕ ನಗರ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಡವಂತಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಕೇಂದ್ರ ಹಾಗೂ ರಾಜ್ಯ ಸರಕಾದ ಜೆಜೆಎಂ ಯೋಜನೆಯ ನೀರಿನ ಟ್ಯಾಂಕ್ ನಿರ್ಮಾಣ, ನೀರಿನ ಪೈಪ್ ಲೈನ್ ಹಾಗೂ ನಳಗಳ ಅಳವಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದರು.
ದೇಶದ ಜನರ ಅನುಕೂಲಕ್ಕಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮನೆ ಮನೆಗೂ ಗಂಗೆ (ಜೆಜೆಎಂ) ಯೋಜನೆ ಅನುಷ್ಠಾನ ಮಾಡಿದ್ದಾರೆ. ಈ ಯೋಜನೆಯಲ್ಲಿ ಒಟ್ಟು 2.80 ಕೋಟಿ ಅನುದಾನದಲ್ಲಿ ನೀರಿನ ಟ್ಯಾಂಕ್, ಪೈಪ್ ಲೈನ್ ಮತ್ತು 879 ಮನೆಗಳಿಗೆ ನಳಗಳ ಅಳವಡಿಕೆ ಮಾಡಲಾಗುತ್ತಿದೆ. ಹೀಗಾಗಿ ಎಇಇ ಹಾಗೂ ಗುತ್ತಿಗೆದಾರರು ಜಾಗೃತಿ ವಹಿಸಿ ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಜತೆಗೆ ಗ್ರಾಮ ಪಂಚಾಯತಿ ಅಧಿಕಾರಿಗಳು ಮತ್ತು ಚುನಾಯಿತ ಸದಸ್ಯರು ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ವಿಧಾನ ಸಭೆ ಚುನಾವಣೆ ಪೂರ್ವದಲ್ಲಿ ಜನರಿಗೆ ನೀಡಿರುವ ಭರವಸೆಯಂತೆ ನಾನು ಶಾಸಕನಾಗಿ ಆಯ್ಕೆಯಾದ ನಂತರ ಕೇವಲ 80 ದಿನಗಳಲ್ಲಿ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ಮಾಣಿಕ ನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಜನರ ನಿರೀಕ್ಷೆಗೆ ಮೀರಿ ಕೆಲಸ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಗ್ರಾಪಂ. ಅಧ್ಯಕ್ಷೆ ಪಂಚಶೀಲ, ಗ್ರಾಪಂ. ಉಪಾಧ್ಯಕ್ಷ ಮಾಣಿಕ, ಗ್ರಾಪಂ. ಮಾಜಿ ಅಧ್ಯಕ್ಷೆ ಚೈತ್ರಾಂಜಲಿ ಮೊಳಕೇರಾ, ಗ್ರಾಪಂ. ಸದಸ್ಯರಾದ ವಿನೋದ ನೀಲಮನಳ್ಳಿ, ದಿಲೀಪ್ ಮರಪಳ್ಳಿ, ಕಲ್ಪನಾ ಶಿವರಾಜ, ಗ್ರಾಪಂ. ಅಧಿಕಾರಿ ಹಣಮಂತಪ್ಪ, ಎಇಇ ಶ್ಯಾಮಸುಂದರ ಕಾಳೆಕರ್, ಉವ ಉದ್ಯಮಿ ಸಂತೋಷ ಪಾಟೀಲ್, ಪ್ರಮುಖರಾದ ರವಿ ಹೊಸಳ್ಳಿ, ಮಲ್ಲಿಕಾರ್ಜುನ್ ಕುಂಬಾರ, ಬಸವರಾಜ ಮೊಳಕೇರಾ, ಬಸವರಾಜ ಪೆÇಲೀಸ್ ಪಾಟೀಲ್, ಈಶ್ವರ ಕಲಬುರ್ಗಿ, ಮಲ್ಲಿಕಾರ್ಜುನ್ ಸೀಗಿ ಸೇರಿ ಅನೇಕರಿದ್ದರು.