ಕಳಪೆ ಕಾಮಗಾರಿ- ಅಧಿಕಾರಿಗಳಿಗೆ ತರಾಟೆ


ಬ್ಯಾಡಗಿ,ಸೆ.16- ಅನುದಾನದ ಲಭ್ಯತೆಯಿದ್ದರೂ ಕೂಡ ಸಕಾಲಕ್ಕೆ ಕಾಮಗಾರಿಗಳನ್ನು ನಿರ್ವಹಿಸುವಲ್ಲಿ ನಿರ್ಲಕ್ಷ್ಯತೆಯನ್ನು ತೋರುತ್ತ ತಾಲೂಕಿನಾದ್ಯಂತ ಕಳಪೆ ಕಾಮಗಾರಿಗಳನ್ನು ಬೇಕಾಬಿಟ್ಟಿಯಾಗಿ ನಡೆಸುತ್ತಿರುವ ಕೆಆರ್’ಐಡಿಎಲ್ (ಭೂಸೇನಾ ನಿಗಮ) ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸ್ಥಳೀಯ ತಾಲೂಕಾ ಪಂಚಾಯತ ಸಭಾಭವನದಲ್ಲಿ ಜರುಗಿದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಭೂಸೇನಾ ನಿಗಮ ಇಲಾಖೆಯ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಇಂಜನಿಯರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ತಾಲೂಕಿನಲ್ಲಿ ಬಹುತೇಕ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಮುಗಿಸಲು ವಿಳಂಬ ಧೋರಣೆ ಅನುಸರಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.


ಪಟ್ಟಣದಲ್ಲಿ ಒಂದು ಕೋಟಿ ರೂಗಳ ವೆಚ್ಚದಲ್ಲಿ ನಿರ್ಮಿಸುತ್ತಿರುವ ತಾಲೂಕಾ ಪಂಚಾಯತ ಕಟ್ಟಡ ಕಾಮಗಾರಿಯನ್ನು ಅಂದಾಜು ಪತ್ರಿಕೆಯ ಪ್ರಕಾರ ಪೂರ್ಣಗೊಳಿಸದೆ ಕಟ್ಟಡ ಕಾಮಗಾರಿ ಪೂರ್ಣವಾಗಿದೆ ಎಂದು ವರದಿ ನೀಡುತ್ತಿರುವ ಅಧಿಕಾರಿಗಳ ಬಗ್ಗೆ ತಾ ಪಂ. ಅಧ್ಯಕ್ಷೆ ಸವಿತಾ ಸುತ್ತಕೋಟಿ, ಉಪಾಧ್ಯಕ್ಷೆ ಶಾಂತಮ್ಮ ದೇಸಾಯಿ ಹಾಗೂ ಜಿಪಂ ಸದಸ್ಯ ಅಬ್ದುಲ್ ಮುನಾಫ್ ಎಲಿಗಾರ ಅವರು ಆಕ್ಷೇಪ ವ್ಯಕ್ತಪಡಿಸಿ ಶಾಸಕರ ಗಮನಕ್ಕೆ ತಂದಾಗ ಅಧಿಕಾರಿಗಳು ಉತ್ತರಿಸಲು ಪರದಾಡುವಂತಾಯಿತು. ಅಂದಾಜು ಪತ್ರಿಕೆಯ ಅನುಸಾರ ಸದರಿ ಕಾಮಗಾರಿ ನಿರ್ಮಾಣ ಸಂದರ್ಭದಲ್ಲಿ 2.60 ಲಕ್ಷ ರೂಗಳಲ್ಲಿ ಬೋರವೆಲ್ ಕೊರೆಸುವುದು ಸೇರಿದಂತೆ ವಿದ್ಯುತ್ ಸಂಪರ್ಕ ಪಡೆದುಕೊಂಡು ಮೋಟಾರ್ ಅಳವಡಿಸಬೇಕು. ಆದರೆ ಈ ಕಾಮಗಾರಿಯನ್ನು ಮಾಡದೇ 99.5 ಲಕ್ಷ ರೂಗಳನ್ನು ವೆಚ್ಚ ಮಾಡಲಾಗಿದೆ ಎಂದು ವರದಿ ನೀಡಿರುವುದು ತಪ್ಪು. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.
ಕಾರ್ಮಿಕ ಇಲಾಖೆಯಿಂದ ಬ್ಯಾಡಗಿ ತಾಲೂಕಿಗೆ ಬಹಳಷ್ಟು ಅನ್ಯಾಯವಾಗಿದೆ. ಇಲಾಖೆಯ ಯೋಜನೆಗಳು ಜನರಿಗೆ ಸಕಾಲಕ್ಕೆ ಸಮರ್ಪಕವಾಗಿ ದೊರೆಯುತ್ತಿಲ್ಲ ಎಂದು ಆರೋಪಿಸಿದರಲ್ಲದೆ, ಇಲಾಖೆಯಿಂದ ನೀಡುತ್ತಿರುವ ಪರಿಹಾರದ ಹಣವನ್ನು ಅರ್ಹ ಫಲಾನುಭವಿಗಳನ್ನು ಗುರುತಿಸಿ ನೀಡುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಇಲಾಖೆಯ ಸಿಬ್ಬಂದಿ ಇಲಾಖೆಯ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನಕ್ಕೆ ತರಲು ಶ್ರಮಿಸುತ್ತಿದ್ದು, ಕೋವಿಡ್ ಸಂದರ್ಭದಲ್ಲಿ ಕಾರ್ಮಿಕ ವರ್ಗಕ್ಕೆ ಒಂದು ಬಾರಿ ನೀಡುವ ಐದು ಸಾವಿರ ರೂ ಪರಿಹಾರಕ್ಕೆ ತಾಲೂಕಿನಲ್ಲಿ 14282 ಅರ್ಜಿ ಸಲ್ಲಿಸಿದ್ದು, ಅದರಲ್ಲಿ 8112 ಜನರಿಗೆ ಈಗಾಗಲೇ ಪರಿಹಾರ ಮಂಜೂರಾಗಿದ್ದು, ಇನ್ನುಳಿದ ಅರ್ಜಿಗಳು ಪರಿಶೀಲನೆಯ ಹಂತದಲ್ಲಿವೆ ಎಂದು ಸಭೆಗೆ ತಿಳಿಸಿದರು.
ತಾಲೂಕಿನಲ್ಲಿ ಕೋವಿಡ್ ಸಮಸ್ಯೆ ಹೆಚ್ಚಾಗಿದ್ದು, ಪಾಸಿಟಿವ್ ಬಂದ ವ್ಯಕ್ತಿಗಳು ಮೃತರಾದಾಗ ಅಂತ್ಯಕ್ರಿಯೆ ನಡೆಸುವ ಅವ್ಯವಸ್ಥೆಯಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಕುರಿತು ತಹಶೀಲ್ದಾರ ಹಾಗೂ ಪೊಲೀಸರ ನೇತೃತ್ವದಲ್ಲಿ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡು ಕೋವಿಡ್ ಹರಡದಂತೆ ಕ್ರಮ ವಹಿಸಲು ಶಾಸಕರು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು. ಈ ಬಗ್ಗೆ ಉತ್ತರಿಸಿದ ಆರೋಗ್ಯಾಧಿಕಾರಿ ಡಾ. ಸುಧೀರ್, ತಾಲೂಕಿನಲ್ಲಿ ಈವರೆಗೂ 666 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಅದರಲ್ಲಿ ಈಗಾಗಲೇ 454 ಜನರು ಗುಣಮುಖರಾಗಿದ್ದಾರೆ. ಇನ್ನು 205 ಜನರು ಚಿಕಿತ್ಸೆಯಲ್ಲಿದ್ದಾರೆ. ಏಳು ಜನರು ಕೋವಿಡ್’ನಿಂದ ಸಾವನ್ನಪ್ಪಿದ್ದಾರೆ. ತಾಲೂಕಿನಾದ್ಯಂತ ಮೂರು ಹಂತದಲ್ಲಿ ಕೋವಿಡ್ ಟೆಸ್ಟಿಂಗ್ ನಡೆಸಲಾಗುತ್ತಿದೆ. ಸಮುದಾಯಗಳಲ್ಲಿ ಇರುವ ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಿದ್ದು, ಅದರಲ್ಲಿ 48 ಜನರ ಸ್ಯಾಂಪಲ್ ಪಡೆದು ಲ್ಯಾಬ್’ಗೆ ಕಳಿಸಿದ್ದು ವರದಿ ಬರಬೇಕಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಣ್ಣ ನೀರಾವರಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ಅವರ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಒತ್ತುವರಿಯನ್ನು ತಡೆಗಟ್ಟಿ ಹದ್ದುಬಸ್ತು ಕಲ್ಪಿಸುವ ಮೂಲಕ ಕೆರೆಗಳ ಸಮಗ್ರ ಅಭಿವೃದ್ಧಿಗೆ ಮುಂದಾಗಬೇಕೆಂದು ಸೂಚಿಸಿದರು. ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿಯನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಶಾಸಕರ ತ್ರೈಮಾಸಿಕ ಕೆಡಿಪಿ ಸಭೆಯ ಪರಿಶೀಲನಾ ಸಮಿತಿಗೆ ನಾಮನಿರ್ದೇಶಿತ ಸದಸ್ಯರಾಗಿ ನೇಮಕಗೊಂಡಿರುವ ಶ್ರೇಣಿಕರಾಜ ಯಳವತ್ತಿ, ನಂದೀಶ ನೆಲ್ಲಿಕೊಪ್ಪದ, ಜಯಣ್ಣ ಚಿಲ್ಲೂರಮಠ, ಗಿರಿಜವ್ವ ದೇಶಗತ್ತಿ, ನಾಗೇಂದ್ರಪ್ಪ ಹರಿಜನ ಹಾಗೂ ಷಣ್ಮುಖಪ್ಪ ಜಿಗಳಿಕೊಪ್ಪ ಅವರನ್ನು ತಾಲೂಕಾ ಪಂಚಾಯತ ಪರವಾಗಿ ಸ್ವಾಗತಿಸಿ ಅಭಿನಂದಿಸಲಾಯಿತು. ತಾಪಂ. ಕಾರ್ಯನಿರ್ವಾಹಕ ಅಧಿಕಾರಿ ಎ.ಟಿ. ಜಯಕುಮಾರ, ತಹಶೀಲ್ದಾರ ಶರಣಮ್ಮ ಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.