ಕಳಪೆ ಕಾಮಗಾರಿಗಳ ಬಿಲ್ ತಡೆಹಿಡಿಯಿರಿ

ದೇವದುರ್ಗ.ಡಿ.೨೯- ಲೋಕೋಪಯೋಗಿ ಇಲಾಖೆಯಿಂದ ಕೈಗೊಂಡ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ಅರೆಬರೆ ಹಾಗೂ ಕಳಪೆಯಾಗಿ ಮಾಡಲಾಗಿದೆ. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರ ಬಿಲ್ ತಡೆಯುವಂತೆ ಒತ್ತಾಯಿಸಿ ಲೋಕೋಪಯೋಗಿ ಇಲಾಖೆ ಎಇಇ ಬಕ್ಕಪ್ಪ ಹೊಸಮನಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಶಿವಪ್ಪ ಪಲಕನಮರಡಿ ಗುರುವಾರ ದೂರು ಸಲ್ಲಿಸಿದ್ದಾರೆ.
೨೦೨೩-೨೪ನೇ ಸಾಲಿನ ಲೋಕೋಪಯೋಗಿ ಇಲಾಖೆಯಿಂದ ತಾಲೂಕಿನಲ್ಲಿ ೨ಪ್ಯಾಕೇಜ್‌ನಲ್ಲಿ ಟೆಂಡರ್ ನೀಡಲಾಗಿದೆ. ಎ.ಎಸ್.ಪಾಟೀಲ್‌ಗೆ ೭೫ ಲಕ್ಷ ಹಾಗೂ ಮಲ್ಲನಗೌಡ ಸುಂಕೇಶ್ವರಹಾಳ ಎನ್ನುವ ಗುತ್ತಿಗೆದಾರರಿಗೆ ೬೦ಲಕ್ಷ ಸೇರಿ ಒಟ್ಟು ೧.೩೫ಕೋಟಿ ರೂ. ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಆದರೆ, ಗುತ್ತಿಗೆದಾರರು ಅರೆಬರೆಯಾಗಿ ಕೆಲಸ ಮಾಡುತ್ತಿದ್ದು, ತಗ್ಗು ದಿನ್ನೆ ಮುಚ್ಚದೆ ರಸ್ತೆ ಸಮತಟ್ಟು ಮಾಡದೆ ಕೆಲಸ ಮಾಡಿದ್ದಾರೆ. ಅಲ್ಲದೆ ಕೆಲಕಡೆ ರಾತ್ರೋರಾತ್ರಿ ಕಾಮಗಾರಿ ಶೇ.೧೦ರಿಂದ ೧೫ರಷ್ಟು ಮಾಡಿ ಕೈತೊಳೆದುಕೊಂಡಿದ್ದಾರೆ ಎಂದು ದೂರಿದರು.
ಗ್ರಾಮೀಣ ಭಾಗದ ಕೆಲ ರಸ್ತೆಗಳನ್ನು ಮಾಡದೆ ಅಧಿಕಾರಿಗಳ ಜತೆ ಶಾಮೀಲಾಗಿ ಅನುದಾನ ಲೂಟಿ ಮಾಡುವ ಪ್ರಕ್ರಿಯೆ ನಡೆದಿದೆ. ಕೂಡಲೇ ಬಿಲ್ ತಡೆದು ತನಿಖೆ ಮಾಡಬೇಕು. ಕಾಮಗಾರಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿ ಬಿಲ್ ಪಾವತಿ ಮಾಡಬೇಕು. ನಿರ್ಲಕ್ಷ್ಯ ಮಾಡಿ ಬಿಲ್ ನೀಡಿದರೆ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.