ಕಳಪೆ ಕಲ್ಲಂಗಡಿ ಬಿತ್ತನೆಬೀಜ ವಿತರಣೆ: ರೈತರ ಆಕ್ರೋಶ

ಕೋಲಾರ,ಜ,೧೯-ಕಳಪೆ ಕಲ್ಲಂಗಡಿ ಬಿತ್ತನೆಬೀಜ ವಿತರಿಸಿರುವ ಯುನಿಜೆನ್ ಸೀಡ್ಸ್ ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ನಷ್ಟವಾಗಿರುವ ರೈತನ ಪ್ರತಿ ಎಕರೆಗೆ ೩ ಲಕ್ಷ ರೂ. ಪರಿಹಾರ ನೀಡಬೇಕೆಂದು ಜಿಲ್ಲಾಡಳಿತವನ್ನು ನೊಂದ ರೈತ ಪರವಾಗಿ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.
ಕಮ್ಮಸಂದ್ರ ಗ್ರಾಮದಲ್ಲಿ ೩ ಎಕರೆ ಜಮೀನಿನಲ್ಲಿ ಬೆಳೆದಿರುವ ಯುನಿಜೆನ್ ಕಂಪನಿಯ ನರ್ಗೀಸ್ ತಳಿಯ ಕಲ್ಲಂಗಡಿ ತೋಟಕ್ಕೆ ಭೇಟಿ ನೀಡಿ ಮಾತನಾಡಿ, ೨ ವರ್ಷ ಕೊರೊನಾ, ಮತ್ತೆರೆಡು ವರ್ಷ ಮುಂಗಾರು ಮಳೆ ಆರ್ಭಟಕ್ಕೆ ತತ್ತರಿಸಿದರೂ ಛಲ ಬಿಡದ ರೈತ ಕಮ್ಮಸಂದ್ರ ವೆಂಕಟರಾಮೇಗೌಡ ೩ ಎಕರೆ ಜಮೀನಿನಲ್ಲಿ ೪ ಲಕ್ಷ ಖಾಸಗಿ ಸಾಲ ಮಾಡಿ ಬೆಳೆದ ಕಲ್ಲಂಗಡಿ ಸಮೃದ್ಧವಾಗಿ ಬೆಳೆದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು ತನ್ನ ಕಷ್ಟ ತೀರುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ರೈತನಿಗೆ ಕಂಪನಿಯ ಕಳಪೆ ಬಿತ್ತನೆ ಬೀಜದಿಂದ ಕೈಗೆ ಬಂದ ಬೆಳೆ ಬಾಯಿಗೆ ಬಾರದೆ ಹಾಕಿದ ಬಂಡವಾಳವೂ ಕೈಗೆ ಸಿಗದೆ ಕಂಪನಿಯ ಮೋಸದಾಟಕ್ಕೆ ರೈತನ ಶ್ರಮ ವ್ಯರ್ಥವಾಗಿದೆ ಎಂದು ನಕಲಿ ಕಂಪನಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಮುಳಬಾಗಿಲು ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್, ಗುರು, ವೇಣು, ನವೀನ್, ಯಾರಂಘಟ್ಟ ಗಿರೀಶ್ ಇದ್ದರು.