ಕಳಪೆ ಕಟ್ಟಡ ಕಾಮಗಾರಿ ಸ್ಥಗಿತಗೊಳಿಸಲು ಮನವಿ

ಲಕ್ಷ್ಮೇಶ್ವರ, ಏ 4 ಃ ಸಮೀಪದ ಶಿಗ್ಲಿ ಗ್ರಾಮದಲ್ಲಿ ಜಿ.ಪಂ.ಯೋಜನೆಯಡಿಯಲ್ಲಿ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡವು ನಿರ್ಮಾಣಗೊಳ್ಳುತ್ತಿದ್ದು, ಕಾಮಗಾರಿಯು ತುಂಬಾ ಕಳಪೆ ಗುಣಮಟ್ಟದಿಂದ ನಡೆಯುತ್ತಿದೆ. ಕಟ್ಟಡಕ್ಕಾಗಿ ಬಳಸಿದ ಕಚ್ಚಾ ಸಾಮಗ್ರಿಗಳೂ ಕಳಪೆ ಗುಣಮಟ್ಟದಲ್ಲಿದ್ದು, ಕಬ್ಬಿಣವು ಸಹ ಕಳಪೆಯಾಗಿದ್ದು, ಈಗಾಗಲೆ ಕಾಲಂಗಳು ಬೆಂಡ್ ಆಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಕಟ್ಟಡವು ಅಪಾಯಕಾರಿಯಾಗುವದರಲ್ಲಿ ಸಂಶಯವಿಲ್ಲ ಅದಕ್ಕಾಗಿ ಸದರಿ ಕಟ್ಟಡದ ಕಾಮಗಾರಿಯನ್ನು ಸ್ಥಗೀತಗೊಳಿಸಬೇಕು ಮತ್ತು ಸಂಬಂಧಿಸಿದ ಇಲಾಖೆಯವರನ್ನು ವಿಚಾರಣೆಗೊಳಪಡಿಸಬೇಕು ಎಂದು ಆಗ್ರಹಿಸಿ ಶಿಗ್ಲಿ ಗ್ರಾಮದ ಶ್ರೀರಾಮ ಸೇನಾದ ಕಾರ್ಯಕರ್ತರು ಪಟ್ಟಣದ ತಹಸೀಲ್ದಾರ ಬ್ರಮರಾಂಭಾ ಗುಬ್ಬಿಶೆಟ್ಟಿ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.
ಕಟ್ಟಡದ ಗುಣಮಟ್ಟವನ್ನು ಸೂಕ್ತವಾದ ಇಲಾಖೆ ಇಂಜನೀಯರ್‍ಗಳು ಹಾಗೂ ಅಧಿಕಾರಿಗಳು ಪರಿಶೀಲನೆ ಮಾಡಿ ನಂತರ ಕಟ್ಟಡ ಕಾಮಗಾರಿ ಮುಂದುವರೆಸಬೇಕು ಎಂದು ಮನವಿ ಮಾಡಿಕೊಳ್ಳಲಾಗಿದೆ. ತಹಸೀಲ್ದಾರ ಮನವಿ ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ಹೇಳಿದರು.
ಶ್ರೀರಾಮ ಸೇನಾದ ತಾಲೂಕ ಅಧ್ಯಕ್ಷ ಪ್ರಕಾಶ ಮಾದನೂರ, ಸಾಗರ ಅಳ್ಳಳ್ಳಿ, ಮಾಂತೇಶ ತಳವಾರ, ಚಂದ್ರು, ಮಾಂತೇಶ ಅಡರಕಟ್ಟಿ, ಸುರೇಶ ತಳ್ಳಳ್ಳಿ ಮುಂತಾದವರಿದ್ದರು.