ಕಳಪೆ ಔಷಧ ಮಾರಾಟಗಾರರ ವಿರುದ್ಧ ದನಿ ಎತ್ತಿ

ಮೈಸೂರು:ಜ:03: ಹಣದ ಆಸೆಗಾಗಿ ಕಳಪೆ ಗುಣಮಟ್ಟದ ಔಷಧಿಗಳನ್ನು ಮಾರಾಟ ಮಾಡುವವರ ವಿರುದ್ಧ ದನಿ ಎತ್ತುವಂತ್ತಾಗಬೇಕೆಂದು ಮೈಸೂರು ನಗರದ ಕಾನೂನು ಸುವ್ಯವಸ್ಥೆ ಉಪ ಪೊಲೀಸ್ ಆಯುಕ್ತ ಎ.ಎನ್. ಪ್ರಕಾಶ್‍ಗೌಡ ಅಭಿಪ್ರಾಯಪಟ್ಟರು.
ಅವರು ಇಂದು ಬೆಳಿಗ್ಗೆ ನಗರದ ಖಾಸಗೀ ಹೊಟೇಲ್‍ನಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ವತಿಯಿಂದ ಆಯೋಜಿಸಿದ್ದ 59ನೇ ರಾಷ್ಟ್ರೀಯ ಫಾರ್ಮಸಿ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಫಾರ್ಮಸಿಗಳು ಆರೋಗ್ಯ ಇಲಾಖೆಯಲ್ಲಿ ಅತಿ ಮಹತ್ವದ ಜವಾಬ್ದಾರಿ ಹೊತ್ತಿರುವ ನೌಕರರಾಗಿದ್ದು, ಅವರು ರೋಗಿಗಳಿಗೆ ನೀಡುವ ಔಷಧಗಳು ವರದಾನದಂತಿವೆ. ಆದರೆ ಇತ್ತೀಚೆಗೆ ಒಂದು ಪರವಾನಗಿ ಪಡೆದು ಅನೇಕ ಔಷಧಿ ಅಂಗಡಿಗಳನ್ನು ತೆರೆದು ಲಾಭದ ಆಸೆಗಾಗಿ ರೋಗಿಗಳ ಪ್ರಾಣ ತೆಗೆಯುವ ಕಳಪೆ ಗುಣಮಟ್ಟದ ಔಷಧಿಗಳನ್ನು ಮಾರಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಂಡುಬರಿತ್ತಿರುವುದು ಸಮಾಜದ ಹಿತ ದೃಷ್ಟಿಯಿಂದ ಅತ್ಯಂತ ಹಾನಿಕರ ಪ್ರಸಂಗ. ಇಂತಹ ಕಳಪೆ ಔಷಧಿಗಳನ್ನು ಮಾರಾಟ ಮಾಡುವವರ ವಿರುದ್ಧ ಫಾರ್ಮಸಿಸ್ಟ್‍ಗಳು ದನಿ ಎತ್ತುವುದರೊಂದಿಗೆ ಅಂತಹವರನ್ನು ಶಿಕ್ಷೆಗೊಳಪಡಿಸಲು ಪೊಲೀಸರ ಸಹಕಾರ ಪಡೆಯಬೇಕೆಂದು ತಿಳಿಸಿದರಲ್ಲದೆ ಔಷಧಿಗಳ ಬಗ್ಗೆ ಸಂಕ್ಷಿಪ್ತ ಲೇಖನಗಳನ್ನು ಬರೆಯುವಂತೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಫಾರ್ಮಸಿಸ್ಟ್‍ಗಳಿಗೆ ಸಲಹೆ ನೀಡಿದರು.
ಮೈಸೂರು ಎಂಎಂಸಿ ಮತ್ತು ಆರ್‍ಎ ನ ಡೀನ್ ಹಾಗೂ ನಿರ್ದೇಶಕ ಡಾ|| ಸಿ.ಪಿ. ನಂಜರಾಜ್ ಮಾತನಾಡಿ, ಫಾರ್ಮಸಿಸ್ಟ್‍ಗಳ ವೃತ್ತಿ ಪ್ರಮುಖ ವೃತ್ತಿಯಾಗಿದೆ. ಫಾರ್ಮಸಿಸ್ಟ್‍ಗಳು ತಾವು ಮಾಡುವ ಕೆಲಸಗಳನ್ನು ಎಂದಿಗೂ ಯಾರಲ್ಲಿಯೂ ಹೇಳಿಕೊಳ್ಳುವುದು ಸರಿಯಲ್ಲ. ಬದಲಾಗಿ ತಮ್ಮ ಜ್ಞಾನಾರ್ಜನೆಯನ್ನು ಮತ್ತಷ್ಟು ವೃದ್ಧಿಗೊಳಿಸುವತ್ತ ಕಾರ್ಯೋನ್ಮುಖರಾಗಬೇಕೆಂದರು. ಇತ್ತೀಚೆಗೆ ಆರೋಗ್ಯ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ವಿವಿಧ ಹುದ್ದೆಗಳಿಗೆ ಸಿಬ್ಬಂಧಿಗಳನ್ನು ನೇಮಿಸಿಕೊಳ್ಳುತ್ತಿರುವುದರಿಂದ ಕಾರ್ಯನಿರ್ವಹಿಸಲು ತೊಂದರೆಯಾಗುತ್ತಿದೆ. ಸರ್ಕಾರ ಇನ್ನು ಮುಂದಾದರೂ ಆರೋಗ್ಯ ಇಲಾಖೆಗೆ ಅಗತ್ಯವಿರುವ ಯಾವುದೇ ಸಿಬ್ಬಂಧಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳದÀಂತೆ ಈಗಾಗಲೆ ಸರ್ಕಾರದೊಂದಿಗೆ ವಿಚಾರ ವಿನಿಮಯ ಮಾಡಲಾಗಿದ್ದು ಈ ಬಗ್ಗೆ ಮುಂದಿನ ದಿನಗಳಲ್ಲಿ ಶುಭ ಸಂದೇಶ ಸಿಗಬಹುದೆಂಬ ಆಶಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಆ ಮತ್ತು ಕು.ಕ. ಸೇವೆಗಳು ಮೈಸೂರು ವಿಭಾಗದ ಜಂಟಿ ನಿರ್ದೇಶಕ ಡಾ|| ಉದಯಕುಮಾರ್, ಎಂ.ಆರ್. ಮೈಸೂರು ಜಿಲ್ಲಾ ಆ. ಮತ್ತು ಕು.ಕ ಅಧಿಕಾರಿ ಡಾ|| ಅಮರನಾಥ್.ಟಿ, ಚಾಮರಾಜನಗರ ಜಲ್ಲಾ ಆ. ಮತ್ತು ಕು.ಕ ಅಧಿಕಾರಿ ಡಾ|| ರವಿ. ಎಂ.ಸಿ, ಮೈಸೂರಿನ ಉಪ ಔಷಧ ನಿಯಂತ್ರಕ ಅರುಣ್.ಜಿ.ಪಿ, ಕ.ರಾ.ಸ.ಫಾ.ಅ. ಸಂಘದ ಅಧ್ಯಕ್ಷ ಗಿರೀಶ್. ಹೆಚ್.ಎಸ್, ಪ್ರಧಾನ ಕಾರ್ಯದರ್ಶಿ ವಿಜಯಲಕ್ಷ್ಮಿ. ಎಂ, ಕೋಶಾಧ್ಯಕ್ಷ ಶಿವಾನಂದದಳವಾಂಬ, ಮೈಸೂರು, ಹಾಸನ, ಚಾಮರಾಜನಗರ, ಶಿವಮೊಗ್ಗ, ಮಂಡ್ಯ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ 200ಕ್ಕೂ ಹೆಚ್ಚು ಫಾರ್ಮಸಿಸ್ಟ್‍ಗಳು ಉಪಸ್ಥಿತರಿದ್ದರು.
ಮೈಸೂರಿನ ಶಾರದ ವಿಲಾಸ ಔಷಧ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ|| ಚರಣ್. ಸಿ.ಎಸ್ ಈ ವರ್ಷದ ವಿಚಾರಧಾರೆ. ಫಾರ್ಮಸಿ ಅಧಿಕಾರಿಗಳು, ಆರೋಗ್ಯ ಇಲಾಖೆಯ ಮುಂಚೂಣಿ ವೃತ್ತಿಪರರ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಕೋವಿಡ್ ಹೋರಾಟದಲ್ಲಿ ಮಡಿದ ಇಲಾಖಾ ಸಿಬ್ಬಂಧಿಗಳಿಗೆ 2 ನಿಮಿಷ ಮೌನಾಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು-ಚಾಮರಾಜನಗರ ಜಿಲ್ಲೆಗಳ ಕ.ರಾ.ಸ. ಫಾರ್ಮಸಿ ಅಧಿಕಾರಿಗಳ ಸಂಘದ ಅಧ್ಯಕ್ಷ ಸಿ.ಎಲ್. ಸೋಮಶೇಖರ್ ವಹಿಸಿದ್ದರು.