
ಕೂಡ್ಲಿಗಿ. ಸೆ 5 :- ಅಖಂಡ ಬಳ್ಳಾರಿ ಜಿಲ್ಲೆಯ ಏಕೈಕವಾಗಿರುವ ಜವಾಹರ ನವೋದಯ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಕಳಪೆ ಆಹಾರ ನೀಡುತ್ತಿರುವುದನ್ನು ಗಮನಸಿದ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಕೋಸಂಬೆ ಅವರು ಅಲ್ಲಿನ ಹಾಸ್ಟೆಲ್ ಉಸ್ತುವಾರಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
ತಾಲೂಕಿನ ಚಿಕ್ಕಜೋಗಿಹಳ್ಳಿ ಜವಾಹರ ನವೋದಯ ವಿದ್ಯಾಲಯಕ್ಕೆ ಸೋಮವಾರ ಭೇಟಿ ನೀಡಿ ಹಾಸ್ಟೆಲ್‌ನಲ್ಲಿ ಆಹಾರ ಪದಾರ್ಥ ದಾಸ್ತಾನು ಕೊಠಡಿಗೆ ತೆರಳಿದ ಆಯೋಗದ ಸದಸ್ಯ ಶಶಿಧರ ಮತ್ತು ಅಧಿಕಾರಿಗಳು, ಅಲ್ಲಿನ ಕೊಳೆತ ತರಕಾರಿ ಹಾಗೂ ಗುಣಮಟ್ಟವಿಲ್ಲದ ಪದಾರ್ಥಗಳನ್ನು ಕಂಡು ಬೇಸರ ವ್ಯಕ್ತಪಡಿಸಿದರು. ಹೆಸರುಕಾಳು ಮತ್ತು ಏಲಕ್ಕಿ ಸೇರಿ ಇತರೆ ಆಹಾರ ಪದಾರ್ಥಗಳು ಶ್ಯಾಂಪಲ್ ಮತ್ತು ಬಳಕೆಯಾಗುವಂಥವುಗಳಿಗೆ ಹೊಂದಾಣಿಕೆಯಾಗುತ್ತಿಲ್ಲ ಎಂದು ಅವುಗಳನ್ನು ಸಂಗ್ರಹಿಸಿದರು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ನೀಡುವುದು, ಉತ್ತಮ ಶಿಕ್ಷಣ ಕೊಡುವುದು ಸೇರಿ ಮಕ್ಕಳ ಹಕ್ಕುಗಳಿಗೆ ಚ್ಯುತಿ ಬರದಂತೆ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು.
ಹಾಸ್ಟೆಲ್‌ಗಳಿಗೆ ಭೇಟಿ: ಕೂಡ್ಲಿಗಿ ತಾಲೂಕಿನ ಚಿಕ್ಕಜೋಗಿಹಳ್ಳಿಯಲ್ಲಿರುವ ಬಿಸಿಎಂ ವಸತಿ ನಿಲಯಕ್ಕೆ ಸೋಮವಾರ ಭೇಟಿ ನೀಡಿದ್ದ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹಾಗೂ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು. ಶುದ್ಧ ಕುಡಿವ ನೀರಿನ ವ್ಯವಸ್ಥೆ ಇಲ್ಲ ಎನ್ನುವುದು ಗಮನಿಸಿ, ಆಹಾರ ದಾಸ್ತಾನು ಹಾಗೂ ಹಾಜರಾತಿ ವಿವರ ನೀಡುವಂತೆ ಕೇಳಿದಾಗ, ಕಂಪ್ಯೂಟರ್ ರಿಪೇರಿಗೆ ಕೊಡಲಾಗಿದೆ. ಅದರಲ್ಲಿ ಎಲ್ಲಾ ವಿವರವಿದೆ ಂದು ಕಿರಿಯ ಮೇಲ್ವಿಚಾರಕ ಮಲ್ಲಿಕಾರ್ಜುನ ತಿಳಿಸಿದರು. ಈ ಬಗ್ಗೆ ಗಮನಹರಿಸುವಂತೆ ಬಿಸಿಎಂ ತಾಲೂಕು ಕಲ್ಯಾಣಾಧಿಕಾರಿಗೆ ಸೂಚಿಸಿದರು. ಅದರಂತೆ, ಕಾನಹೊಸಹಳ್ಳಿ ಬಿಸಿಎಂ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿದ್ದ ಆಯೋಗದ ಸದಸ್ಯರು, ಹಾಸ್ಟೆಲ್ ಪರಿಸರ ವಿದ್ಯಾರ್ಥಿಗಳಿಗೆ ಪೂರಕವಾಗಿದೆ ಎಂದರಲ್ಲದೆ, ಅಚ್ಚುಕಟ್ಟಾಗಿ ನಿರ್ವಹಣೆ ಮಾಡಲಾಗುತ್ತಿದೆ ಎಂದು ಮೆಚ್ಚುಗೆ ಸೂಚಿಸಿದರು. ಈ ಸಂದರ್ಭದಲ್ಲಿ ಹಾಸ್ಟೆಲ್ ಮೇಲ್ವಿಚಾರಕ ರಾಚಪ್ಪ ಸೇರಿ ಅಡುಗೆ ಸಿಬ್ಬಂದಿ ಇದ್ದರು.
ಕಸ್ತೂರ ಬಾ ಗಾಂಧಿ ಶಾಲೆಗೆ ಭೇಟಿ: ತಾಲೂಕಿನ ಬಣವಿಕಲ್ಲು ಗ್ರಾಮದ ಕಸ್ತೂರ ಬಾ ಗಾಂಧಿ ವಸತಿ ಶಾಲೆಗೆ ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ಶಶಿಧರ ಸೇರಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೀರು ಪೂರೈಕೆಯ ತೊಟ್ಟಿಯಲ್ಲಿ ಪಾಚಿ ಕಟ್ಟಿರುವುದನ್ನು ನೋಡಿ ಮುಖ್ಯಶಿಕ್ಷಕಿ ವೀಣಾ ಅವರಿಗೆ ಅಡುಗೆಗೆ ಮತ್ತು ಕುಡಿಯಲು ನೀರು ಯೋಗ್ಯವಾಗಿಲ್ಲ. ದೂರು ಪೆಟ್ಟಿಗೆಯಿಲ್ಲ. ಸಿಸಿ ಕ್ಯಾಮರಾ ದುರಸ್ತಿಯಾಗಿವೆ. ಮಕ್ಕಳ ರಕ್ಷಣಾ ಸಮಿತಿ ಸಭೆ ನಡೆಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರಲ್ಲದೆ, ಕೂಡಲೆ, ಕುಡಿವ ನೀರು ಮತ್ತು ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸೂಚಿಸಿದರು. ಅದರಂತೆ, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಕಾರ್ಯಕರ್ತೆಯನ್ನು ಹಾಜರಾತಿ ಪುಸ್ತಕ ನೀಡುವಂತೆ ಕೇಳುತ್ತಿದ್ದಂತೆ, ಗಲಿಬಿಲಿಗೊಂಡ ಕಾರ್ಯಕರ್ತೆ ಸ್ವಲ್ಪ ಬರೆಯುವು ಇದ್ದ ಕಾರಣ ಮನೆಗೆ ಕೊಂಡೊಯ್ದಿದ್ದೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರಾದೇವಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕ ಭೋಗೇಶ್, ಸಿಡಿಪಿಒ ನಾಗನಗೌಡ ಪಾಟೀಲ್, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪಂಪಾಪತಿ ಸೇರಿ ಇತರರಿದ್ದರು.