ಕಳಪೆ ಆಹಾರ ಧಾನ್ಯ ಪೂರೈಸುತ್ತಿರುವವರ ವಿರುದ್ಧ ಕ್ರಮ ಜರುಗಿಸಿ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಸೆ.23: ನ್ಯಾಯ ಬೆಲೆ ಅಂಗಡಿಗಳ ಮೂಲಕ ಗ್ರಾಹಕರಿಗೆ ಕಳಪೆ ಆಹಾರ ಧಾನ್ಯಗಳನ್ನು ಪೂರೈಕೆ ಮಾಡುತ್ತಿರುವವರ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ತಾಲೂಕು ಕಾಂಗ್ರೆಸ್ ಮುಖಂಡ ಹಾಗೂ ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಬಿ.ಎಲ್.ದೇವರಾಜು ಆಗ್ರಹಿಸಿದರು.
ಕಳಪೆ ಗುಣಮಟ್ಟದ ಪಡಿತರ ವಿತರಣೆಯಾಗುತ್ತಿರುವ ಬಗ್ಗೆ ತಾಲೂಕು ರೈತಸಂಘ ನೀಡಿದ ದೂರಿನ ಹಿನ್ನೆಲೆಯಲ್ಲಿ ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು ಮತ್ತು ತಾಲೂಕು ರೈತ ಮುಖಂಡರು ಮಾತನಾಡಿ ಕಳಪೆ ಆಹಾರ ಧಾನ್ಯಗಳ ಪೂರೈಕೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಬ್ಯಾಲದಕೆರೆ ನ್ಯಾಯಬೆಲೆ ಅಂಗಡಿಯ ಮೂಲಕ ಗ್ರಾಹಕರಿಗೆ ವಿತರಣೆ ಮಾಡಿದ್ದ ಕಲ್ಲು ಮಣ್ಣು ಮಿಶ್ರಿತ ರಾಗಿಯನ್ನು ಸಭೆಯಲ್ಲಿ ಪ್ರದರ್ಶಿಸಿದ ರೈತ ಮುಖಂಡರು ಕಳಪೆ ರಾಗಿಯನ್ನು ಜನ ತಿನ್ನಲು ಅರ್ಹವಾಗಿದ್ದರೆ ನಾವು ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇವೆ. ಇದು ಜನರು ತಿನ್ನಲು ಯೋಗ್ಯವಲ್ಲ ಎನ್ನುವುದಾದರೆ ಇಂತಹ ಕಳಪೆ ರಾಗಿಯನ್ನು ಖರೀದಿಸಿದ ಖರೀದಿ ಅಧಿಕಾರಿಗಳು ಮತ್ತು ಅದನ್ನು ಪರಿಸೀಲಿಸಿ ತಿರಸ್ಕರಿಸದೆ ಗ್ರಾಹಕರಿಗೆ ವಿತರಣೆ ಮಾಡಿದ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ದ ಕ್ರಮ ಜರುಗಿಸುವಂತೆ ರೈತ ಮುಖಂಡರು ಆಗ್ರಹಿಸಿದರು.
ರೈತ ಮುಖಂಡರ ಆರೋಪಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಮುಖಂಡ ಬಿ.ಎಲ್.ದೇವರಾಜು ಗ್ರಾಹಕರಿಗೆ ವಿತರಣೆಯಾದ ರಾಗಿಯಲ್ಲಿ ಕಲ್ಲು ಮಣ್ಣಿನ ಜೊತೆಗೆ ರಂಗೋಲೆ ಪುಡಿಯೂ ಸೇರಿದೆ. ರಾಗಿಯಲ್ಲಿ ಕಲ್ಲು ಮಣ್ಣು ಒಂದಷ್ಟು ಪ್ರಮಾಣದಲ್ಲಿ ಕಣದಲ್ಲಿ ಒಕ್ಕಣೆ ಮಾಡುವ ಸಂದರ್ಭದಲ್ಲಿ ಬರಬಹುದು. ಆದರೆ ರಂಗೋಲೆ ಪುಡಿ ಹೇಗೆ ಬಂದಿತು? ಇದು ಕಲಬೆರಕೆಯಲ್ಲವೆ? ರೈತರು ಎಂದಿಗೂ ಕಳಪೆ ರಾಗಿಯನ್ನು ಮಾರಾಟ ಮಾಡುವುದಿಲ್ಲ. ಕಲಬೆರೆಕೆಯ ಕಳಪೆ ರಾಗಿಯನ್ನು ಖರೀದಿಸಿ ಸರ್ಕಾರಕ್ಕೆ ಮತ್ತು ಪಡಿತರ ಗ್ರಾಹಕರನ್ನು ವಂಚಿಸಿರುವ ನೌಕರರ ವಿರುದ್ದ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದರು.
ತಾಲೂಕು ರೈತಸಂಘದ ಅಧ್ಯಕ್ಷ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಮಾತನಾಡಿ ಖರೀದಿ ಕೇಂದ್ರದಲ್ಲಿನ ಬ್ರಷ್ಟಾಚಾರವೇ ಕಳಪೆ ರಾಗಿ ಪೂರೈಕೆಗೆ ಕಾರಣ. ದಳ್ಳಾಳಿಗಳೊಂದಿಗೆ ಶಾಮೀಲಾಗಿರುವ ಖರೀದಿ ಕೇಂದ್ರದ ಸಿಬ್ಬಂಧಿಗಳು ಕಳಪೆ ರಾಗಿಯನ್ನು ಖರೀದಿಸಿ ನ್ಯಾಯಬೆಲೆ ಅಂಗಡಿಗಳಿಗೆ ಅದನ್ನು ಪೂರೈಕೆ ಮಾಡಿದ್ದಾರೆ. ಖರೀದಿ ಕೆಂದ್ರದ ಜೊತೆ ಶಾಮೀಲಾಗಿರುವ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಕಳಪೆ ಪಡಿತರ ಪದಾರ್ಥಗಳನ್ನು ತಿರಸ್ಕರಿಸದೆ ಪಡಿತರ ಗ್ರಾಹಕರಿಗೆ ವಿತರಿಸುತ್ತಿದ್ದಾರೆ. ಜನರು ತಿನ್ನಲಾಗದ ಪಡಿತರ ಆಹಾರವನ್ನು ಪೂರೈಕೆ ಮಾಡಿದವರ ವಿರುದ್ದ ಸಮಗ್ರ ತನಿಖೆ ನಡೆಸ ಬೇಕು. ಖರೀದಿ ಕೇಂದ್ರದ ದಾಸ್ತಾನು ಮಳಿಗೆಗೆ ಭೇಟಿ ನೀಡಿ ಅಲ್ಲಿ ಎಷ್ಷು ಪ್ರಮಾಣದ ಕಳಪೆ ರಾಗಿ ಸಂಗ್ರಹವಿದೆ ಎನ್ನುವುದನ್ನು ಪರಿಶೀಲಿಸುವಂತೆ ಒತ್ತಾಯಿಸಿದರು.
ಕಳಪೆ ರಾಗಿ ಖರೀದಿಯ ಬಗ್ಗೆ ತಮ್ಮ ಅಸಮಾದಾನ ಹೊರಹಾಕಿದ ತಹಸೀಲ್ದಾರ್ ನಿಸರ್ಗ ಪ್ರಿಯ ರಾಗಿಯ ಗುಣಮಟ್ಟ ಪರಿಶೀಲಿಸಲು ಯಾವುದೇ ಯಂತ್ರೋಪಕರಣಗಳ ಅವಶ್ಯಕತೆಯಿಲ್ಲ. ನೋಡುವ ಕಣ್ಣುಗಳಿದ್ದರೆ ಸಾಕು. ಖರೀದಿ ಕೇಂದ್ರದಲ್ಲಿನ ಲೋಪದಿಂದ ನ್ಯಾಯಬೆಲೆ ಅಂಗಡಿಗಳಿಗೆ ಕಳಪೆ ರಾಗಿ ಪೂರೈಕೆಯಾಗಿದೆ ಎಂದರು.
ಖರೀದಿ ಕೇಂದ್ರದಲ್ಲಿನ ರಾಗಿ ದಾಸ್ತಾನು ಬಗ್ಗೆ ಸಭೆಯಲ್ಲಿ ವಿವರ ಪಡೆದ ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಕುಮಾರ್ ತಾಲೂಕಿನ ಖರೀದಿ ಕೆಂದ್ರದ ಮೂಲಕ ಪ್ರಸಕ್ತ ಸಾಲಿನಲ್ಲಿ 1,28,020 ಕ್ವಿಂಟಾಲ್ ರಾಗಿ ಖರೀದಿಸಿದ್ದು ಇದರಲ್ಲಿ 70 ಸಾವಿರ ಕ್ವಿಂಟಾಲ್ ರಾಗಿಯನ್ನು ನಾಗರೀಕ ಆಹಾರ ಸರಬರಾಜು ಇಲಾಖೆಗೆ ಪೂರೈಕೆ ಮಾಡಲಾಗಿದೆ.
ಯಾವುದೇ ಕಾರಣಕ್ಕೂ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಗ್ರಾಹಕರಿಗೆ ವಿತರಿಸದಂತೆ ನ್ಯಾಯಬೆಲೆ ಅಂಗಡಿಗಳಿಗೆ ಸೂಚಿಸಲಾಗಿದೆ. ಕಳಪೆ ಗುಣ ಮಟ್ಟದ ಆಹಾರ ಧಾನ್ಯಗಳನ್ನು ತಿರಸ್ಕರಿಸುವಂತೆ ಸೂಚಿಸಿರುವುದರಿಂದ ಕಳಪೆ ಗುಣಮಟ್ಟದ ಪಡಿತರ ವಿತರಿಸಿದರೆ ಅದಕ್ಕೆ ನ್ಯಾಯ ಬೆಲೆ ಅಂಗಡಿ ಮಾಲೀಕರನ್ನೆ ಜವಾಬ್ದಾರರನ್ನಾಗಿಸುವುದಾಗಿ ಆದೇಶಿಸುವುದಾಗಿ ತಿಳಿಸಿದರಲ್ಲದೆ ಕಳಪೆ ರಾಗಿ ಖರೀದಿಸಿದ ಖರೀದಿ ಕೇಂದ್ರದ ಲೋಪಗಳ ಬಗ್ಗೆ ಸರ್ಕಾರಕ್ಕೆ ವರದಿ ಮಾಡುವುದಾಗಿ ತಿಳಿಸಿದರು.