ಕಳಪೆಮಟ್ಟದ ರಸ್ತೆ ಕಾಮಗಾರಿ ಕೈಗೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದಸಂಸ ಪ್ರತಿಭಟನೆ

ಶಹಾಬಾದ:ಸೆ.15:ನಗರದಿಂದ ಹೊರಡುವ ಎಲ್ಲಾ ಪ್ರಮುಖ ರಸ್ತೆಗಳು ಕಳಪೆ ಕಾಮಗಾರಿಯಿಂದ ಹದಗೆಟ್ಟಿರುವುದು ಹಾಗೂ ಪ್ರಗತಿ ಕಾಲೋನಿ ಯೋಜನೆಯ ಹಣ ದುರ್ಬಳಕೆ ಮತ್ತು ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಬುಧವಾರ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಸುಮಾರು 1 ಗಂಟೆಗೂ ಹೆಚ್ಚು ಕಾಲ ಪ್ರತಿಭಟನಾಕಾರರು ಹರಿದು ಚಿಂದಿಯಾಗಿರುವ ರಸ್ತೆಯ ಮೇಲೆ ಕುಳಿತುಕೊಂಡು ಪ್ರತಿಭಟಿಸಿ ಒಮ್ಮೆ ಅಧಿಕಾರಿಗಳು ರಸ್ತೆ ಸಂಪೂರ್ಣ ವೀಕ್ಷಿಸುವಂತೆ ಪಟ್ಟು ಹಿಡಿದರು.ಇದರಿಂದ ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಯಿತು.
ನಂತರ ಮಾತನಾಡಿದ ಪ್ರತಿಭಟನಾಕಾರರು,ನಗರದ ವಾಡಿ ವೃತ್ತದಿಂದ ಕನಕದಾಸ ವೃತ್ತ ಹಾಗೂ ತೊನಸನಹಳ್ಳಿ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದೆ.ಈಗಾಗಲೇ ರಸ್ತೆ ಹಳ್ಳಹಿಡಿದಿದೆ.ವಾಡಿ ವೃತ್ತದ ಸ್ವಾಗತ ಕಮಾನ್ ಸಮೀಪದಿಂದ ರೇಲ್ವೆ ಸೇತುವೆವರೆಗಿನ ಸುಮಾರು 300 ಮೀ. ರಸ್ತೆ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ಸುಮಾರು 76 ಲಕ್ಷ ರೂ. ಅನುದಾನ ಒದಗಿಸಲಾಗಿದೆ. ಆದರೆ ಗುತ್ತಿಗೆದಾರ ತರಾತುರಿಯಲ್ಲಿ ಕಳಪೆ ಕಾಮಗಾರಿ ಮಾಡಿ ಬಿಲ್ ಎತ್ತಿ ಹಾಕಲು ಮುಂದಾಗಿದ್ದಾನೆ. ಅಲ್ಲದೇನಗರಸಭೆಯಿಂದ ನಗರೋತ್ಥಾನ ಯೋಜನೆಯ 3 ಹಂತದಲ್ಲಿ ಸುಮಾರು 4ಕೋಟಿ 17ಲಕ್ಷ ರೂ. ಅನುದಾನದಲ್ಲಿ ಬಸವೇಶ್ವರ ವೃತ್ತದಿಂದ ಕನಕದಾಸ ವೃತ್ತದವರೆಗಿನ ರಸ್ತೆ ಹಾಗೂಲೋಕೋಪಯೋಗಿ ಇಲಾಖೆಯಿಂದ ಕನಕದಾಸ ವೃತ್ತದಿಂದ ತೊನಸನಹಳ್ಳಿ(ಎಸ್) ಗ್ರಾಮದ ರಾಜ್ಯ ಹೆದ್ದಾರಿ ರಸ್ತೆಗೆ ಕೋಟಿಗಟ್ಟಲೇ ಹಣವನ್ನು ಒದಗಿಸಲಾಗಿದೆ. ಇದು ಕೂಡ ಕಳಪೆ ಮಟ್ಟದ ಕಾಮಗಾರಿಯಿಂದ ಸಂಪೂರ್ಣ ತಗ್ಗುಗಳು ಬಿದ್ದಿವೆ. ಇಷ್ಟೆಲ್ಲಾ ಕಳಪೆ ಮಟ್ಟದ ಕಾಮಗಾರಿಗಳು ನಡೆಯುತ್ತಿದ್ದರೂ, ಜೆಇ,ಎಇ,ಎಇಇ ಹಾಗೂ ಇಇ ಏನು ಮಾಡುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ.ಅಲ್ಲದೇ ಈ ಕಾಮಗಾರಿಗಳಿಗೆ ಬಿಲ್ ಮಾಡಲು ಒತ್ತಾಯ ಹೇರಲಾಗುತ್ತಿದೆ.ಅಲ್ಲದೇ ಇದರಲ್ಲಿ ಅಧಿಕಾರಿಗಳು ಶಾಮೀಲು ಆಗಿದ್ದಾರೆ. ರಸ್ತೆಯಲ್ಲಿ ದೊಡ್ಡ ದೊಡ್ಡ ತಗ್ಗುಗಳು ಉಂಟಾಗಿವೆ. ಸಾರ್ವಜನಿಕರಿಗೆ ಎಲ್ಲಿಲ್ಲದ ತೊಂದರೆಯಾಗುತ್ತಿದೆ. ರಸ್ತೆಯ ಮೇಲೆ ಹೋದರೆ ಯಾವ ನರಕಕ್ಕೆ ಹೋಗಿದ್ದೆವು ಎನಿಸುತ್ತಿದೆ.ಪಾಪ ಮಾಡಿದವರು ಈ ರಸ್ತೆ ಬರಬಾರದು ಆ ಮಟ್ಟಿಗೆ ಹೊಸದಾದ ರಸ್ತೆಗಳು ಹರಿದು ಚಿಂದಿಯಾಗಿವೆ. ಶಾಸಕರು ಮಾತ್ರ ಏನು ಮಾಡುತ್ತಿಲ್ಲ. ಶಹಾಬಾದ ಜನರು ಏನು ಪಾಪ ಮಾಡಿದ್ದರೋ ಏನೋ ಇಂತಹ ಜನಪ್ರತಿನಿಧಿ ಹಾಗೂ ಕಳಪೆ ಮಟ್ಟದ ರಸ್ತೆಗಳು ಸಿಕ್ಕಿವೆ ಎಂದು ಆಕ್ರೋಶ ಹೊರಹಾಕಿದರು.ಈ ಕೂಡಲೇ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು.ಯಾವುದೇ ಕಾರಣಕ್ಕೂ ಬಿಲ್ ಪಾವತಿ ಮಾಡಬಾರದು ಎಂದರಲ್ಲದೇ, ನಗರದ ಎಸ್‍ಸಿ/ಎಸ್‍ಟಿ ಬಡಾವಣೆಗಳಲ್ಲಿ ಪ್ರಗತಿ ಕಾಲೋನಿ ಯೋಜನೆಯಡಿಯಲ್ಲಿ ಲಕ್ಷಾಂತರ ಅನುದಾನ ಹಣ ದುರ್ಬಳಕೆ ಮಾಡಲಾಗಿದೆ.ಅಲ್ಲಿ ಮಾಡಿರುವ ಎಲ್ಲಾ ಕಾಮಗಾರಿಗಳು ಕಳಪೆ ಮಟ್ಟದಿಂದ ಕೂಡಿವೆ.ಪ್ರಗತಿ ಕಾಲೋನಿಯ ಮುಖ್ಯ ಉದ್ದೆಶಕ್ಕೆ ಕೊಡಲಿಪೆಟ್ಟು ಬಿದ್ದಂತಾಗಿದೆ.ದಲಿತರಿಗೆ ಮೀಸಲಿಟ್ಟ ಹಣವನ್ನು ಎಸ್‍ಸಿ/ಎಸ್‍ಟಿ ಬಡಾವಣೆಯಲ್ಲಿ ಕಾಮಗಾರಿಗಳನ್ನು ಮಾಡದೇ ಬೇರೆ ಬಡಾವಣೆಗಳಲ್ಲಿ ಕೆಲಸ ಮಾಡಿಸಿದ್ದಾರೆ.ಆದ್ದರಿಂದ ಎಸ್‍ಸಿ/ಎಸ್‍ಟಿ ಕಾಯ್ದೆ ಅಡಿಯಲ್ಲಿ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಬೇಕೆಂದು ಎಂದು ಒತ್ತಾಯಿಸಿದರು.
Àನಂತರ ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ ಅವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಕರಾದಸಂಸ ಜಿಲ್ಲಾ ಮುಖಂಡ ಕೃಷ್ಣಪ್ಪ ಕರಣಿಕ್, ತಾಲೂಕಾ ಸಂಚಾಲಕ ಮಹಾದೇವ ತರನಳ್ಳಿ, ತಾಲೂಕಾ ಸಂ.ಸಂಚಾಲಕರಾದ ತಿಪ್ಪಣ್ಣ ಧನ್ನೇಕರ್, ಮಹಾದೇವ ಮೇತ್ರೆ, ಹೋಬಳಿ ಸಂಚಾಲಕ ಲಕ್ಷ್ಮಣ ಕೊಲ್ಲೂರ್, ನಾಗೇಂದ್ರ ಪಾಳಾ,ನಾಗರಾಜ ಸಿಂಘೆ, ರಾಮಕುಮಾರ ಸಿಂಘೆ,ಮಲ್ಲಿಕಾರ್ಜುನ ಜಲಂಧರ್,ಶರಣು ಧನ್ನೇಕರ್ ಇತರರು ಇದ್ದರು.