ಕಳಂಕಿತರ ವಿರುದ್ಧ ಕ್ರಮ ನಿಶ್ಚಿತ: ಜೋಶಿ

ಹುಬ್ಬಳ್ಳಿ, ಮಾ. 5: ಕಳಂಕಿತರು ಯಾವುದೇ ಪಕ್ಷದ ನಾಯಕರಾಗಿದ್ದರೂ ಅವರ ವಿರುದ್ಧ ಕ್ರಮ ನಿಶ್ಚಿತ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟವಾಗಿ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ವಿರುಪಾಕ್ಷಪ್ಪ ಮಾಡಾಳರ ಪ್ರಕರಣ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ ಶಾಸಕ ಮಾಡಾಳರ ಪುತ್ರನ ವಿರುದ್ಧ ಪ್ರಕರಣ ದಾಖಲಾಗಿದ್ದು ಸೂಕ್ತ ಕ್ರಮ ನಡೆದೇ ನಡೆಯುತ್ತದೆ ಎಂದು ಹೇಳಿದರು.
ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಲೋಕಾಯುಕ್ತರಿಗೆ ಸ್ವತಂತ್ರ ಅಧಿಕಾರವಿರಬಾರದು ಎಂಬ ಕಾರಣಕ್ಕೆ ಅರ್ಧ ಎಸಿಬಿ ಅರ್ಧ ಲೋಕಾಯುಕ್ತ ಮಾಡಿ ಎರಡೂ ಸಂಸ್ಥೆಗಳನ್ನು ಹಲ್ಲಿಲ್ಲದ ಹುಲಿಯನ್ನಾಗಿಸಿತ್ತು. ತಮಗೆ ದೊರೆತ ಮಾಹಿತಿ ಮೇರೆಗೆ ಲೋಕಾಯುಕ್ತದ ತೀರ್ಪು ಬಂದಾಗ ಅದರ ವಿರುದ್ಧ ಅಪೀಲು ಹೋಗುವಂತೆಯೂ ಕಾಂಗ್ರೆಸ್ ಪಕ್ಷ ಸಲಹೆ ನೀಡಿತ್ತು. ಆದರೆ ಬಿಜೆಪಿ ಸರ್ಕಾರ ಹೀಗೆ ಮಾಡದೆ ಸಿಎಂ ಬೋಮ್ಮಾಯಿಯವರ ನೇತೃತ್ವದಲ್ಲಿ ಚರ್ಚೆ ನಡೆಸಿ ಲೋಕಾಯುಕ್ತವನ್ನು ಬಲಿಷ್ಠಗೊಳಿಸಲು ನಿರ್ಧರಿಸಿತು. ಬಿಜೆಪಿ ಸರ್ಕಾರದ ಆಡಳಿತ ಯಾವಾಗಲೂ ಪಾರದರ್ಶಕವಾಗಿದೆ. ಇಲ್ಲ ಯಾವುದೇ ಮುಚ್ಚುಮರೆ ಇಲ್ಲ ಎಂದವರು ನುಡಿದರು.
ರಾಜ್ಯಕ್ಕೆ ಪ್ರಧಾನಿ ಮೋದಿ, ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಬಂದರೆ ಚುನಾವಣೆ ಮೇಲೆ ಯಾವುದೇ ಪರಿಣಾಮವಾಗುವುದಿಲ್ಲ ಎಂಬ ವಿಪಕ್ಷನಾಯಕ ಸಿದ್ಧರಾಮಯ್ಯನವರ ಹೇಳಿಕೆಗೆ ಪ್ರತಿಕ್ರಿಯಿಸುತ್ತ, ಮೋದಿ ಹಾಗೂ ಅಮಿತ್ ಶಾ ರಾಜ್ಯಕ್ಕೆ ಬಂದರೆ ಸಿದ್ಧರಾಮಯ್ಯನವರಿಗೆ ಭಯವಾಗದೇ ಇರದು, ಆದರೆ ಅದನ್ನವರು ಹೇಳಲಾರರು ಎಂದು ಜೋಶಿ ಚುಚ್ಚಿದರು.
ಪ್ರಧಾನಿ ಮೋದಿ ಅವರು ರಾಷ್ಟ್ರ ರಾಜಕಾರಣಕ್ಕೆ ಬಂದನಂತರ ಸಿದ್ಧರಾಮಯ್ಯ ಎಲ್ಲ ಚುನಾವಣೆಗಳಲ್ಲೂ ಸೋತಿದ್ದಾರೆ. ಮೋದಿ ಬರುವ ಮುನ್ನ 2013 ರಲ್ಲಿ ಗೆದ್ದಿದ್ದರಾದರೂ ಮೋದಿಯವರು ಬಂದನಂತರ 2014 ರಲ್ಲಿ ಕರ್ನಾಟಕದಲ್ಲಿ ಬಹುತೇಕ ಸ್ಥಾನಗಳನ್ನು ಅವರು ಸೋತರು. 2018 ರಲ್ಲಿ ಅವರ ಪಕ್ಷ ಸೋಲುವುದಿರಲಿ ಸ್ವತಃ ಸಿಎಂ ಆಗಿಯೂ ಸಿದ್ದರಾಮ್ಯಯನವರೇ ಸೋತು ಹೋದರು. ಪ್ರಧಾನಿ ವಿರುದ್ಧ ಅಸಭ್ಯ, ಅಭದ್ರ ಭಾಷೆ ಬಳಸಿದ್ದರ ಪರಿಣಾಮ ಇದಾಗಿತ್ತು. 2019 ರಲ್ಲಿಯೂ ಸೋಲನುಭವಿಸಿದ್ದು ಮೂರು ಬಾರಿ ಸತತವಾಗಿ ಸೋತಿದ್ದಕ್ಕಾಗಿ ರಾಜಕೀಯವನ್ನೇ ಬಿಟ್ಟುಬಿಡಬೇಕಿತ್ತು ಎಂದ ಅವರು, ಸದ್ಯ ಸಿದ್ಧರಾಮಯ್ಯನವರು ಕೊನೆಯ ಬಾರಿ ಡಿ.ಕೆ. ಶಿವಕುಮಾರ್ ವಿರುದ್ಧ ಮತ್ತೊಮ್ಮೆ ಸಿ.ಎಂ. ರೇಸ್‍ನಲ್ಲಿದ್ದಾರೆ ಎಂದು ಕುಟುಕಿದರು.

ದಿ.12 ರಂದು ರಾಜ್ಯಕ್ಕೆ ಪ್ರಧಾನಿ:

ಇದೇ ದಿ. 12 ರಂದು ರಾಜ್ಯಕ್ಕೆ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸುತ್ತಿದ್ದಾರೆ. ಅಂದು ಮಂಡ್ಯದ ಮದ್ದೂರಿನಲ್ಲಿ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸುವರು. ಮದ್ಯಾಹ್ನ 2ಕ್ಕೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ನಂತರ ಧಾರವಾಡ ಐ.ಐ.ಟಿ. ಉದ್ಘಾಟನೆ ನೆರವೇರಿಸಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ಅವರು ತಿಳಿಸಿದರು.
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಬಿಜೆಪಿಗೆ ಸೇರ್ಪಡೆಗೊಳ್ಳುವ ಕುರಿತಾದ ಪ್ರಶ್ನೆಗೆ ಉತ್ತರಿಸುತ್ತ, ಸುಮಲತಾ ಸ್ವತಂತ್ರ ಅಭ್ಯರ್ಥಿ, ಅವರು ಬಿಜೆಪಿಗೆ ಬೆಂಬಲ ನೀಡಿದ್ದಾರೆ, ನಮ್ಮ ಪರವಾಗಿ ಮತ ಚಲಾವಣೆ ಮಾಡಿದ್ದಾರೆ, ಹೀಗಾಗಿ ಅವರಿಗೆ ಬಿಜೆಪಿ ಪರ ಒಲವಿದೆ ಎಂದು ಜೋಶಿ ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಸಿ.ಸಿ.ಪಾಟೀಲ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ, ಮುಖಂಡರಾದ ಸತೀಶ್ ಶೇಜವಾಡಕರ್, ಪ್ರಭು ನವಲಗುಂದಮಠ, ರವಿ ನಾಯಕ ಇದ್ದರು.