ಕಲ್ಲೂರು ಪ್ರಾ.ಆರೋಗ್ಯ ಕೇಂದ್ರ: ಬಾಣಂತಿಯರಿಗೆ ನೆಲದ ಮೇಲೆ ಚಿಕಿತ್ಸೆ

ಸಚಿವರಿಂದ ದೊರೆಯುವುದೇ ಹೊಸ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ
(ರಾಚಯ್ಯ ಸ್ವಾಮಿ ಮಾಚನೂರು)
ರಾಯಚೂರು.ಜ.೪.ಕಲ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಿಂದ ಹಿಡಿದು ರೋಗಿಗಳಿಗೆ ಚಿಕಿತ್ಸೆ ನೀಡುವವರೆಗೂ ಇಲ್ಲಿ ಅನಾನುಕೂಲಗಳಿವೆ. ಪ್ರಮುಖವಾಗಿ ಒಂದೇ ಒಂದು ಬೆಡ್ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರು ಹಸುಗೂಸಿನೊಡನೆ ನೆಲದ ಮೇಲೆಯೆ ಮಲಗುವ ದುಸ್ಥಿತಿ ಬಂದಿದೆ.
ಸಿರವಾರ ತಾಲೂಕಿನ ಕಲ್ಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವ್ಯವಸ್ಥೆಯ ದೊಡ್ಡ ಪಟ್ಟಿಯೇ ಇದೆ.
ಬರೋಬ್ಬರಿ ೧೫-೨೦ ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ ಸುಸಜ್ಜಿತ ಆಸ್ಪತ್ರೆ ಒದಗಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆರೋಗ್ಯ ಕೇಂದ್ರ ಚಿಕ್ಕದಾಗಿರುವುದರಿಂದ ಬೆಡ್ ಗಳ ಸಂಖ್ಯೆ ಕೇಲವ ಒಂದು. ಒಂದೇ ಬೆಡ್ ಮೇಲೆಯೆ ರೋಗಿಗಳ ಚಿಕಿತ್ಸೆ ನೀಡಬೇಕು. ಇಲ್ಲ ನೆಲದ ಮೇಲೆ ಮಲಗಿ ಚಿಕಿತ್ಸೆ ಪಡೆಯಬೇಕು.
ವಾರದಲ್ಲಿ ಒಂದೇ ಬಾರಿ ಮೂರು ಜನ ಗರ್ಭಿಣಿಯರು ಆಸ್ಪತ್ರೆಗೆ ಹೆರಿಗೆಗೆ ಬಂದಿರುವುದರಿಂದ ನೆಲದ ಮೇಲೆಯೆ ಅವರಿಗೆ ಚಿಕಿತ್ಸೆ ನೀಡಲಾಗಿದೆ, ಹಸುಗೂಸಿನೊಡನೆ ಬಾಣಂತಿಯರನ್ನೂ ಒಬ್ಬರ ಪಕ್ಕದಲ್ಲಿ ಒಬ್ಬರಂತೆ ತಣ್ಣನೆಯ ವಾತಾವರಣದಲ್ಲಿ ಮಲಗಿಸಲಾಗಿದೆ. ಇದರಿಂದ ಮಗುವಿಗೆ ಹಾಗೂ ಬಾಣಂತಿಗೆ ಆರೋಗ್ಯದಲ್ಲಿ ವೈಪರೀತ್ಯ ಆಗಿ ಏನಾದ್ರು ದುರಂತ ಸಂಭವಿಸಿದರೆ ಯಾರು ಹೊಣೆ ಎನ್ನುವುದು ಸ್ಥಳೀಯರ ಪ್ರಶ್ನೆಯಾಗಿದೆ.
ಈ ಆಸ್ಪತ್ರೆಗೆ ಬರುವ ಕೇವಲ ರೋಗಿಗಳು ಮಾತ್ರ ಸಮಸ್ಯೆ ಎದುರಿಸುತ್ತಿಲ್ಲ.
ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಕಾರ್ಯವೈಫಲ್ಯದಿಂದಾಗಿ ಆಸ್ಪತ್ರೆಯಲ್ಲಿಯ ಸಿಬ್ಬಂದಿಗಳೂ ಸಹ ನಾನಾ ಕಷ್ಟಕ್ಕೆ ಸಿಲುಕಿದ್ದಾರೆ. ಇಬ್ಬರು ಸ್ಟಾಫ್ ನರ್ಸ್, ಒಬ್ಬ ಆಯುಷ್ ವೈದ್ಯರಿರುವ ಈ ಆಸ್ಪತ್ರೆಯ ಸಿಬ್ಬಂದಿಗಳಿಗೆ ಶೌಚಾಲಯಕ್ಕೂ ನೀರು ಸಿಗದಂತಾಗಿದೆ. ಪಕ್ಕದ ಮನೆಗಳಿಗೆ ಶೌಚಾಲಯಕ್ಕೆ ತೆರಳುವಂತಾಗಿರೋದು ದುರಂತ ಅಂತಾ ತಪ್ಪಾಗಲ್ಲ. ಹಾಗೆಯೆ ಇಲ್ಲಿಯ ಆಸ್ಪತ್ರೆಯಲ್ಲಿ ಕಬ್ಬಿಣಾಂಶದ ಮಾತ್ರೆಗಳ ದಿನಾಂಕಾವಧಿ ಮುಗಿದಿದ್ರೂ ರೋಗಿಗಳಿಗೆ ವಿತರಿಸಲಾಗುತ್ತಿದೆ ಎಂದು ಗಂಭೀರ ಆರೋಪವಾಗಿದೆ.
ಈ ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ಕಟ್ಟಿ ಒಂದು ವರ್ಷವಾಗುತ್ತ ಬಂದರು ಉದ್ಘಾಟನಾ ಭಾಗ್ಯ ಮಾತ್ರ ದೊರೆತಿಲ್ಲ.ಜನರ ಆರೋಗ್ಯ ಕಾಳಜಿಗಿಂತ ಆರೋಗ್ಯ ಸಚಿವರು ಆಗಮಿಸಿ ಉದ್ಘಾಟಿಸುವವರೆಗೂ ಇಲ್ಲಿಯ ಸಮಸ್ಯೆಗೆ ಪರಿಹಾರ ಇಲ್ಲ. ಇಂತಹ ತೀವ್ರ ಆರೋಗ್ಯ ಸಮಸ್ಯೆ ಸಮಯದಲ್ಲೂ ಸಚಿವರಿಗೋಸ್ಕರ ಕಾಯಬೇಕಾ? ಎಂದು ಸಾರ್ವಜನಿಕರು ಸರ್ಕಾರಕ್ಕೆ ಪ್ರಶ್ನೆಸುತ್ತಿದ್ದರೆ. ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಈ ಹೊಸ ಕಟ್ಟಡ ಉದ್ಘಾಟನೆ ಮಾಡಿ ಜನರ ಅನಾರೋಗ್ಯಕ್ಕೆ ಉತ್ತಮ ಚಿಕಿತ್ಸೆ ಸಿಗುತ್ತಾ ಎಂಬುದು ಕಾದುನೋಡಬೇಕಿದೆ.