ಕಲ್ಲೂರು: ಇಓರಿಂದ ಕುಡಿವ ನೀರಿನ ಕೆರೆ ವೀಕ್ಷಣೆ

ಸಿರವಾರ.ಮಾ.೨೩- ತಾಲೂಕಿನ ಕಲ್ಲೂರು ಗ್ರಾಮ ಪಂಚಾಯತಿಗೆ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ರವರು ಭೇಟಿ ನೀಡಿ ಕುಡಿಯುವ ನೀರಿನ ಕೆರೆಯನ್ನು ವೀಕ್ಷಣೆ ಮಾಡಿದರು.
ಬೇಸಿಗೆ ಹಿನ್ನೆಲೆಯಲ್ಲಿ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಈಗಾಗಲೇ ಕೆರೆಗೆ ನೀರು ಹರಿಸಿದ ಕಾರಣ ನೀರಿನ ಪ್ರಮಾಣವನ್ನು ಚೆಕ್ ಮಾಡಿದರು. ಕೆರೆಗೆ ಇನ್ನೂ ಭರ್ತಿ ಮಾಡುವ ಕುರಿತು ಸಂಬಂಧಪಟ್ಟ ಇಲಾಖೆಯವರಿಗೆ ದೂರವಾಣಿ ಮುಖಾಂತರ ಮಾತನಾಡಿ ಎರಡು ಕೆರೆಗಳನ್ನು ಭರ್ತಿ ಮಾಡಬೇಕೆಂದರು.
ಸೋಮವಾರದಿಂದ ಆರಂಭವಾಗಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆ ಸಿದ್ಧತೆ ಮಾಡಿಕೊಂಡಿರುವದರ ಬಗ್ಗೆ ಮಾಹಿತಿ ಪಡೆದುಕೊಂಡರು.ಪರೀಕ್ಷೆ ಕೊಠಡಿಗಳನ್ನು ವೀಕ್ಷಣೆ ಮಾಡಿದರು.
ಮೇ.೭ರಂದು ನಡೆಯಲಿರುವ ಲೋಕಸಭಾ ಚುನಾವಣಾ ಮತದಾನ ಅಂಗವಾಗಿ ಮತದಾನ ಕೇಂದ್ರಗಳನ್ನು ವೀಕ್ಷಣೆ ಮಾಡುತ್ತ ಕೇಂದ್ರಕ್ಕೆ ಅಗತ್ಯ ಸೌಲಭ್ಯಗಳಾದ ಬಾಗಿಲು, ಕಿಟಕಿ, ವಿದ್ಯುತ್ ಸಂಪರ್ಕ, ರಾಂಪ್, ನೀರಿನ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಬೇಕೆಂದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ದೇವಪ್ಪ, ಅಧ್ಯಕ್ಷ ಸಂಗಪ್ಪಗೌಡ ಹಾಗೂ ಗ್ರಾ.ಪಂ. ಸಿಬ್ಬಂದಿ ಇದ್ದರು.