ಕಲ್ಲು ಗಣಿಗಾರಿಕೆ ತಡೆಯಲು ಹೋದ ಡಿಎಸ್‍ಪಿ ಮೇಲೆ ಟ್ರಕ್ ಹರಿಸಿ‌ ಕೊಲೆ

ಚಂಡೀಗಢ (ಹರಿಯಾಣ), ಜು.19- ಅಕ್ರಮವಾಗಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆಯನ್ನು ತಡೆಯಲು ಹೋದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಕಲ್ಲು ತುಂಬಿದ ಟ್ರಕ್ ಹರಿಸಿ ಬರ್ಬರ ಕೊಲೆ ಮಾಡಿದ ದಾರುಣ ಘಟನೆ ನುಹ್ ನಲ್ಲಿ ನಡೆದಿದೆ.
ಡಿಎಸ್‍ಪಿ ಶ್ರೇಣಿಯ ಅಧಿಕಾರಿ ಸುರೇಂದ್ರ ಸಿಂಗ್ ಬಿಷ್ಣೋಯ್ ಕೊಲೆಯಾದವರು.
ನುಹ್ ನ ಅರಾವಳಿ ಪರ್ವತ ಶ್ರೇಣಿಯ ಸಮೀಪದ ಪಚಗಾಂವ್‍ನಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಲಾಗುತ್ತಿದೆ ಎಂದು ಡಿಎಸ್‍ಪಿ ಶ್ರೇಣಿಯ ಅಧಿಕಾರಿ ಸುರೇಂದ್ರ ಸಿಂಗ್ ಬಿಷ್ಣೋಯ್ ಅವರು ಮಾಹಿತಿ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪೊಲೀಸ್ ತಂಡದೊಂದಿಗೆ ಪಚಗಾಂವ್‍ಗೆ ತೆರಳಿದ್ದಾರೆ.
ಈ ವೇಳೆ ಪೊಲೀಸ್ ಸಿಬ್ಬಂದಿಯನ್ನು ಕಂಡ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದವರು ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಡಿಎಸ್‍ಪಿ ಸುರೇಂದ್ರಸಿಂಗ್ ಅವರು ದಾರಿಯಲ್ಲಿ ನಿಂತು ಕಲ್ಲು ತುಂಬಿದ ವಾಹನಗಳನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಟ್ರಕ್‍ನ ಚಾಲಕ ಅವರ ಮೇಲೆ ಟ್ರಕ್‍ನ್ನು ಹರಿಸಿದ್ದರಿಂದ ಡಿಎಸ್‍ಪಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಡಿಎಸ್‍ಪಿ ಜೊತೆಯಿದ್ದ ಮತ್ತಿಬ್ಬರು ಪೊಲೀಸರು ತಪ್ಪಿಸಿಕೊಂಡಿದ್ದರಿಂದ ಘಟನೆಯಿಂದ ಪಾರಾಗಿದ್ದಾರೆ. ಘಟನೆ ಸಂಬಂಧಿಸಿ ಆರೋಪಿಗಳು ಪರಾರಿಯಾಗಿದ್ದಾರೆ.
ಘಟನೆ ಕುರಿತು ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಹರಿಯಾಣ ಪೊಲೀಸ್ ಟ್ವೀಟ್ ಮಾಡಿ ಡಿಜಿಪಿಗೆ ಸಂತಾಪ ವ್ಯಕ್ತಪಡಿಸಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸುವುದಾಗಿ ತಿಳಿಸಿದ್ದಾರೆ.