ಕಲ್ಲು ಗಣಿಗಾರಿಕೆ ಆದೇಶ ಹಿಂಪಡೆಯಲು ಆಗ್ರಹ

ಕೊರಟಗೆರೆ, ಸೆ. ೧೬- ಪುರಾತನ ಕಾಲದ ಬೆಟ್ಟಗುಡ್ಡ ಕರಗಿಸುವ ಉದ್ದೇಶದಿಂದ ಕೊರಟಗೆರೆ ಕ್ಷೇತ್ರದ ೧೭೫ ಕಡೆ ಕಲ್ಲುಗಣಿಗಾರಿಕೆ ಮತ್ತು ಕ್ರಷರ್ ಸ್ಥಾಪಿಸಲು ರಾಜ್ಯ ಸರ್ಕಾರದ ಮಟ್ಟದಲ್ಲಿ ಅನುಮತಿ ನೀಡಲು ಪೂರ್ವ ಸಿದ್ದತೆ ನಡೆಯುತ್ತಿದೆ ಎಂದು ಎಲೆರಾಂಪುರ ಮಠದ ಪೀಠಾಧ್ಯಕ್ಷರಾದ ಡಾ.ಹನುಮಂತನಾಥ ಸ್ವಾಮೀಜಿ ಆರೋಪಿಸಿದರು.
ತಾಲ್ಲೂಕಿನ ಕೋಳಾಲ ಹೋಬಳಿ ಎಲೆರಾಂಪುರ ಗ್ರಾ.ಪಂ. ವ್ಯಾಪ್ತಿಯ ತಂಗನಹಳ್ಳಿ ಗ್ರಾಮದಲ್ಲಿ ಎಲೆರಾಂಪುರ ಶ್ರೀಮಠ ಮತ್ತು ರೈತ ಸಂಘದ ವತಿಯಿಂದ ಏರ್ಪಡಿಸಿದ್ದ ರೈತ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸಿದ್ದರಬೆಟ್ಟ, ಗೊರವನಹಳ್ಳಿ, ದೇವರಾಯನದುರ್ಗ, ನಾಮದಚಿಲುಮೆ, ಕ್ಯಾಮೇನಹಳ್ಳಿ ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಹತ್ತಾರು ಮಠ ಮಂದಿರಗಳಿವೆ. ಕೊರಟಗೆರೆ ಕ್ಷೇತ್ರದ ೩೫೫ ಗ್ರಾಮದಲ್ಲಿ ೨೯೦ ಅಂಗನವಾಡಿ ಕೇಂದ್ರ, ೩೦೦ಕ್ಕೂ ಹೆಚ್ಚು ಶಾಲಾ-ಕಾಲೇಜು ಸೇರಿದಂತೆ ೨೫ ಸಾವಿರ ಕೋಟಿ ರೂ. ವೆಚ್ಚದ ಎತ್ತಿನಹೊಳೆ ಯೋಜನೆಯ ಕಾಮಗಾರಿ ಚಾಲ್ತಿಯಲ್ಲಿದೆ. ತಕ್ಷಣ ಸರ್ಕಾರ ತಂಗನಹಳ್ಳಿ ಗಣಿಗಾರಿಕೆ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.
ಕೋಳಾಲ ಜಿ.ಪಂ. ಸದಸ್ಯ ಶಿವರಾಮಯ್ಯ ಮಾತನಾಡಿ, ತಂಗನಹಳ್ಳಿ ರೈತರ ೪೯ ಎಕರೇ ಜಮೀನಿನ ಜತೆಗೆ ಜರಿಬೆಟ್ಟದ ಸುತ್ತಮುತ್ತಲಿನ ೩೦೦ ಎಕರೇ ಪರಿಸರ ವಲಯದಲ್ಲಿ ಗಣಿಗಾರಿಕೆ ನಡೆಸಲು ಹುನ್ನಾರ ನಡೆಸಲಾಗಿದೆ. ರೈತರ ಹೆಸರಿನಲ್ಲಿ ಅಧಿಕಾರ ಪಡೆಯುವ ಸರ್ಕಾರ ರೈತರ ವಿರೋಧವಾಗಿ ಕೆಲಸ ಮಾಡುತ್ತೀದೆ. ಗಣಿಗಾರಿಕೆ ಆದೇಶದ ವಿರುದ್ದ ತುಮಕೂರು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರದ ವಿರುದ್ದ ಧರಣಿ ಸತ್ಯಾಗ್ರಹ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕೊರಟಗೆರೆ ರೈತ ಸಂಘದ ಅಧ್ಯಕ್ಷ ರಂಗಹನುಮಯ್ಯ ಮಾತನಾಡಿ, ಭಾರತ ದೇಶ ಕೃಷಿ ಪ್ರಧಾನವಾದ ರಾಷ್ಟ್ರವಾಗಿದೆ. ಚುನಾವಣೆ ವೇಳೆ ರೈತರ ಜತೆಗಿರುವ ಭರವಸೆ ನೀಡುವ ಜನನಾಯಕರು ಇಂದು ಕಾಣೆಯಾಗಿದ್ದಾರೆ. ರೈತ ಸಂಘ ಮತ್ತು ಹಸಿರುಸೇನೆ ಸದಾ ರೈತರ ಜತೆಗಿದ್ದು ಹೋರಾಟ ನಡೆಸುತ್ತೇವೆ. ರೈತರ ತಾಳ್ಮೆ ಮತ್ತು ಸಹನೆಯನ್ನು ಸರ್ಕಾರ ಪರೀಕ್ಷೆ ಮಾಡಬಾರದು. ಜಮೀನು ದಳ್ಳಾಳಿ ಗ್ರಾಮಕ್ಕೆ ಭೇಟಿ ನೀಡಿದರೇ ತಕ್ಕ ಪಾಠ ಕಲಿಸಿ ಎಂದರು.
ಈ ಸಂದರ್ಭದಲ್ಲಿ ತಾ.ಪಂ. ಸದಸ್ಯ ಬೋರಣ್ಣ, ರೈತ ಮುಖಂಡರಾದ ರವೀಂದ್ರ, ರಾಮಕೃಷ್ಣಪ್ಪ, ಉಮೇಶ್, ತಿಮ್ಮರಾಜು, ಜಯಣ್ಣ, ಶಿವಲಿಂಗಯ್ಯ, ನಾಗರಾಜು, ರಾಜಣ್ಣ, ತಿಮ್ಮಣ್ಣ, ಶಿವಲಿಂಗಯ್ಯ, ರಾಮಚಂದ್ರಯ್ಯ, ಆಂಜನಮೂರ್ತಿ, ನರಸರಾಜು, ನಂಜಮ್ಮ, ನರಸಮ್ಮ ಮತ್ತಿತರರು ಉಪಸ್ಥಿತರಿದ್ದರು.