ಕಲ್ಲು ಎತ್ತಿ ಹಾಕಿ ವ್ಯಕ್ತಿ ಕೊಲೆ: ನಾಲ್ಕು ಗಂಟೆಯಲ್ಲೇ ಆರೋಪಿ ಸೆರೆ

ಕಲಬುರಗಿ,ಏ.18-ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಹೊನ್ನಕಿರಣಗಿಯಲ್ಲಿ ನಿನ್ನೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಗಂಟೆಯಲ್ಲೇ ಆರೋಪಿಯನ್ನು ಬಂಧಿಸುವಲ್ಲಿ ಫರಹತಾಬಾದ್ ಪೊಲೀಸರು ಯಶಸ್ವಿಯಾಗಿದ್ದಾರೆ.
ತನ್ನ ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿರುವ ಸಂಶಯದ ಮೇಲೆ ನಾಗಯ್ಯ ತಂದೆ ಶಿವಲಿಂಗಯ್ಯ ಎಂಬಾತ ಪಕ್ಕದ ಮನೆಯ ಈರಣ್ಣ ತಂದೆ ಮಹಾದೇವಪ್ಪ ಎಂಬುವವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ. ಈರಣ್ಣ ಅವರು ಗ್ರಾಮದ ಹಳ್ಳದಲ್ಲಿರುವ ಕೊಳವೆ ಬಾವಿಗೆ ನೀರು ತರಲೆಂದು ಹೋದ ವೇಳೆ ಈ ಕೊಲೆ ನಡೆದಿತ್ತು.
ಈ ಸಂಬಂಧ ಮೃತನ ತಾಯಿ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಡಿಸಿಪಿಗಳಾದ ಕನಿಕಾ ಸಿಕ್ರಿವಾಲ್, ಪ್ರವೀಣ್ ಹೆಚ್.ನಾಯಕ್, ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಡಿ.ಜಿ.ರಾಜಣ್ಣ ಅವರ ಮಾರ್ಗದರ್ಶನದಲ್ಲಿ ಫರಹತಾಬಾದ್ ಪೊಲೀಸ್ ಠಾಣೆಯ ಪಿಐ ಬಾಲಚಂದ್ರ ಲಕ್ಕಂ ಅವರ ನೇತೃತ್ವದಲ್ಲಿ ಪಿಎಸ್‍ಐ ಸೈಯದ್ ಪಟೇಲ್, ಎ.ಎಸ್.ಐ ಚಂದ್ರಕಾಂತ ನಂದೂರ, ಸಿಬ್ಬಂದಿಗಳಾದ ಮನೋಹರ, ಧರ್ಮಣ್ಣ, ವಿಜಯಕುಮಾರ, ರಾಜಕುಮಾರ ಪವಾರ್ ಅವರು ತನಿಖೆ ನಡೆಸಿ ಬೈಕ್ ಮೇಲೆ ಪರಾರಿಯಾಗಲು ಯತ್ನಿಸಿದ ಆರೋಪಿ ನಾಗಯ್ಯನನ್ನು ಸೊನ್ನ ಕ್ರಾಸ್ ಹತ್ತಿರ ಬಂಧಿಸಿ ಬೈಕ್ ವಶಪಡಿಸಿಕೊಂಡಿದ್ದಾರೆ.
ಕೊಲೆ ಆರೋಪಿಯನ್ನು ನಾಲ್ಕು ಗಂಟೆಯಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯವನ್ನು ನಗರ ಪೊಲೀಸ್ ಆಯಕ್ತ ಚೇತನ್ ಆರ್.ಅವರು ಶ್ಲಾಘಿಸಿದ್ದಾರೆ.