ಕಲ್ಲು ಎತ್ತಿ ಹಾಕಿ ಯುವಕನ ಕೊಲೆ : ಮೂವರ ಬಂಧನ

ಕಲಬುರಗಿ,ಏ.3-ನಗರದ ಜಿಮ್ಸ್ ಆಸ್ಪತ್ರೆ ಎದುರುಗಡೆ ಮಾ.29 ರಂದು ಸಾಯಂಕಾಲ ನಡೆದ ಬಾಪು ನಗರ ಬಡಾವಣೆಯ ವಿರತಾ ತಂದೆ ವಿಠ್ಠಲ ಉಪಾಧ್ಯ (24) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ತೌಸೀಫ್ ತಂದೆ ಹಾಜಿಮಿಯ್ಯಾ ಶೇಖ್ (24), ಅಂಬರೀಶ ತಂದೆ ಬಂಡಪ್ಪ ಮಳಖೇಡ (28) ಮತ್ತು ಜೈಭೀಮ ತಂದೆ ಅನಂತಪ್ಪ ಗಣಜಲಖೇಡ (26) ಎಂಬುವವರನ್ನು ಬಂಧಿಸಲಾಗಿದೆ.
ವಿರತಾ ಉಪಾಧ್ಯಯನನ್ನು ಲಾಲ್ಯಾ ಅಲಿಯಾಸ್ ಪ್ರಸಾದ, ವಿಶಾಲ ನವರಂಗ, ಸತೀಶಕುಮಾರ ಅಲಿಯಾಸ್ ಗುಂಡು ಫರತಾಬಾದ, ಬಾಂಬೆ ಸಂಜ್ಯಾ, ತೌಸೀಫ್ ಮತ್ತು ಇತರರು ಸೇರಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಬಗ್ಗೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತ ಎನ್.ಸತೀಶಕುಮಾರ, ಉಪ ಪೊಲೀಸ್ ಆಯುಕ್ತರಾದ ಡಿ.ಕಿಶೋರಬಾಬು, ಶ್ರೀಕಾಂತ ಕಟ್ಟಿಮನಿ, ಎ ಉಪ ವಿಭಾಗದ ಎಸಿಪಿ ಅಂಶುಕುಮಾರ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಗಾಗಿ ಬ್ರಹ್ಮಪುರ ಪೊಲೀಸ್ ಠಾಣೆಯ ಪಿಐ ನೇತೃತ್ವದಲ್ಲಿ ಪಿಎಸ್ಐ ವಾಹಿದ್ ಕೊತ್ವಾಲ್, ಎ.ಎಸ್.ಐ ಸಲೀಮುದ್ದಿನ್, ಸಿಬ್ಬಂದಿಗಳಾದ ಶಿವಪ್ರಕಾಶ, ರಾಮು ಪವಾರ, ಸಂಜಯಕುಮಾರ ಅವರನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳ ಪತ್ತೆಗೆ ಶೋಧ ನಡೆಸಿದೆ.
ವಿರತಾ ಉಪಾಧ್ಯಾ ಕೊಲೆಗೆ ಪ್ರತಿಕಾರವಾಗಿ ಬಾಪು ನಗರ ಬಡಾವಣೆಯ ಸುಮಾರು ಜನರು ಸುಂದರ ನಗರ ಬಡಾವಣೆಗೆ ನುಗ್ಗಿ 5 ಕಾರು, 3 ಆಟೋ, 30ಕ್ಕಿಂತ ಹೆಚ್ಚು ದ್ವಿಚಕ್ರ ವಾಹನಗಳಿಗೆ ಕಲ್ಲು ಬಡಿಗೆಗಳಿಂದ ಹೊಡೆದು ಜಖಂಗೊಳಿಸಿದ್ದರು. ಅಲ್ಲದೆ ಜಿಲ್ಲಾ ಸರಕಾರಿ ಆಸ್ಪತ್ರೆಯ ಗ್ಲಾಸ್ ಒಡೆದು ಗಾನಿ ಮಾಡಿದ್ದರು. ಈ ಬಗ್ಗೆ ಬ್ರಹ್ಮಪುರ ಠಾಣೆಯಲ್ಲಿ 10 ಪ್ರಕರಣ ದಾಖಲಾಗಿದ್ದು, ಅದರಲ್ಲಿ 3 ಪ್ರಕರಣಗಳು ಕೊಲೆಯತ್ನ ಉಳಿದ ಪ್ರಕರಣಗಳು ದೊಂಬಿ ಪ್ರಕರಣ ದಾಖಲಾಗಿರುತ್ತದೆ. ಈ ಪ್ರಕರಣಗಳಲ್ಲಿ ಇಲ್ಲಿಯವರೆಗೆ ಸುಮಾರು 48 ಜನ ಆರೋಪಿತರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.