ಕಲ್ಲಿದ್ದಲು ನಿಗಮದಿಂದ ಈಕ್ವಿಟಿ ಹೂಡಿಕೆಗೆ ಅಸ್ತು

ನವದೆಹಲಿ,ಜ.೨೫:ಭಾರತೀಯ ಕಲ್ಲಿದ್ದಲು ನಿಗಮ(ಸಿಐಎಲ್)ದಿಂದ ಈಕ್ವಿಟಿ ಹೂಡಿಕೆಗೆ ಕೇಂದ್ರ ಸರ್ಕಾರ ಅನುಮೋದಿಸಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಕೇಂದ್ರ ಕಲ್ಲಿದ್ದಲು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಪ್ರಧಾನಿ ನರೆಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಸಿಐಎಲ್‌ನಿಂದ ಈಕ್ವಿಟಿ ಹೂಡಿಕೆಗೆ ಅನುಮೋದನೆ ಸಿಕ್ಕಿದೆ ಎಂದು ಹೇಳಿದ್ದಾರೆ.
ಸಿಐಎಲ್ ಮತ್ತು ಜಿಎಐಎಲ್ ಜಂಟಿ ಉದ್ಯಮದ ಮೂಲಕ ಇಸಿಎಲ್ ಕಮಾಂಡ್‌ನಲ್ಲಿ ಕಲ್ಲಿದ್ದಲು-ಎಸ್‌ಎನ್‌ಜಿ ಯೋಜನೆಯನ್ನು ಸ್ಥಾಪಿಸಲು ನೆರವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಎಂಸಿಎಲ್ ಕಮಾಂಡ್‌ನಲ್ಲಿ ಅಮೋನಿಯಂ ನೈಟೆರೇಡ್ ಯೋಜನೆ ಸ್ಥಾಪಿಸಲು ಸಿಐಎಲ್ ಮತ್ತು ಬಿಹೆಚ್‌ಇಎಲ್ ಜಂಟಿ ಉದ್ಯಮವನ್ನು ರೂಪಿಸಲು ಅನುವು ಮಾಡಿಕೊಡುತ್ತದೆ ಎಂದು ಅವರು ಹೇಳಿದರು.
ಕೇಂದ್ರ ಸಂಪುಟದ ಈ ನಿರ್ಧಾರದಿಂದ ಕಚ್ಚಾ ಮತ್ತು ನೈಸರ್ಗಿಕ ಅನಿಲ ಆಧಾರಿತ ಉತ್ಪನ್ನಗಳ ಆಮದಿನ ಮೇಲಿನ ನಮ್ಮ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಜೋಶಿ ಅವರು ಹೇಳಿ ಸ್ಥಳೀಯ ತಂತ್ರಜ್ಞಾನ ಮತ್ತು ಉತ್ಪನ್ನ ಆಧಾರಿತ ಅನಿಲೀಕರಣ ಸ್ಥಾವರವನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರಿ ಸಾರ್ವಜನಿಕ ಉದ್ದಿಮೆಗಳು ಮತ್ತು ಖಾಸಗಿ ವಲಯದ ಕಲ್ಲಿದ್ದಲು/ಲಿಗ್‌ನೈಟ್ ಅನಿಲೀಕರಣ ಯೋಜನೆಗಳ ಉತ್ತೇಜನದ ಯೋಜನೆಗೂ ಸಂಪುಟ ಅನುಮೋದನೆ ನೀಡಿದೆ ಎಂದರು.
ಮೂರು ವಿಭಾಗಗಳ ಅಡಿಯಲ್ಲಿ ಕಲ್ಲಿದ್ದಲು ಅನಿಲೀಕರಣ ಯೋಜನೆಗಳಿಗೆ ೮,೫೦೦ ಕೋಟಿ ರೂ.ಗಳನ್ನು ಮೀಸಲಿಡಲಾಗುವುದು ಎಂದು ಕೇಂದ್ರ ಸಚಿವ ಜೋಶಿ ಎಕ್ಸ್‌ನಲ್ಲಿ ತಿಳಿಸಿದ್ದಾರೆ.