ಕಲ್ಲಿದ್ದಲು ಥರ್ಮಲ್ ಪವರ್ ವಿರುದ್ಧದ ಫಿರೋಜಾಬಾದ್ ಧರಣಿ ಸ್ಥಳಕ್ಕೆ ತಹಸಿಲ್ದಾರ್ ಭೇಟಿ: ಬೇಡಿಕೆಗಳಿಗೆ ಸ್ಪಂದನೆ

ಕಲಬುರಗಿ:ಅ.14:ತಾಲ್ಲೂಕಿನ ಫಿರೋಜಾಬಾದ್‍ನಲ್ಲಿ ಕಲ್ಲಿದ್ದಲು ಥರ್ಮಲ್ ಪವರ್ ಕಂಪೆನಿ ವಿರುದ್ಧ ರೈತರು ಹಮ್ಮಿಕೊಂಡಿದ್ದ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ತಹಸಿಲ್ದಾರ್ ಪ್ರಕಾಶ್ ಕುದುರಿ ಅವರು ಗುರುವಾರ ಭೇಟಿ ನೀಡಿ, ಬೇಡಿಕೆಗಳಿಗೆ ಸ್ಪಂದಿಸಿದರು.
ಈ ಸಂದರ್ಭದಲ್ಲಿ ರೈತ ಅಬ್ದುಲ್ ಲತೀಫ್ ಎಸ್.ಎಂ. ಜಾಗೀರದಾರ್ ಅವರು ತಹಸಿಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ, ತಾಲ್ಲೂಕಿನ ಫಿರೋಜಾಬಾದ್, ನದಿಸಿಣ್ಣೂರ್ ಗ್ರಾಮಗಳ ರೈತರ 1600 ಎಕರೆ ಜಮೀನುಗಳಲ್ಲಿ ಕಲ್ಲಿದ್ದಲು ಥರ್ಮಲ್ ಪವರ್‍ಗಾಗಿ ಸ್ವಾಧೀನಪಡಿಸಿಕೊಂಡಿದ್ದು, ಅದರಲ್ಲಿ 1600 ಎಕರೆ ಜಮೀನಿನಲ್ಲಿ ಕೇವಲ 50 ಎಕರೆ ಜಮೀನು ವರ್ಗಾಯಿಸಿದ ಮ್ಯೂಟೇಶನ್ ನಕಲು ನೀಡುವಂತೆ ಒತ್ತಾಯಿಸಿದರು.
ಸರ್ವೆ ನಂಬರ್ 139ರ ಜಮೀನಿನಲ್ಲಿ ಸರ್ಕಾರದ ವತಿಯಿಂದ ಅನುಮತಿ ಪಡೆದ ದಾಖಲಾತಿ ನಕಲುಗಳು, ಪರಿಸರ ಇಲಾಖೆ, ಭೂ ವಿಜ್ಞಾನ ಇಲಾಖೆ, ಕೃಷಿ ಮತ್ತು ಇತರೆ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದಿದ್ದ ದಾಖಲಾತಿ ನಕಲುಗಳು, ಗ್ರಾಮ ಪಂಚಾಯಿತಿ ಪರವಾನಿಗೆ ಪಡೆದ ನಕಲುಗಳನ್ನು ನೀಡುವಂತೆ, ರೈತರ 1600 ಎಕರೆ ಜಮೀನು ಸ್ವಾಧೀನ ಪಡೆದ ಜಮೀನಿನಲ್ಲಿ ಕೇವಲ ಒಂದೇ ಸರ್ವೆ ನಂಬರ್ ವಶಕ್ಕೆ ಪಡೆದ ಕುರಿತು ಉತ್ತರ ನೀಡುವಂತೆ ಅವರು ಆಗ್ರಹಿಸಿದರು.
ಸುತ್ತಮುತ್ತಲಿನ ರೈತರ ಕೃಷಿ ಜಮೀನುಗಳಿಗೆ ಯಾವುದೇ ಅಪಾಯ ಆಗುವ ಕುರಿತು ವಿಚಾರಿಸಿ ರೈತರ ಕೃಷಿ ಜಮೀನು ನಾಶ ಆಗದಂತೆ ಏನೇನು ವ್ಯವಸ್ಥೆ ಕೈಗೊಳ್ಳಲಾಗಿದೆ ಎಂಬುದನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿದ ಅವರು, ಕಾಮಗಾರಿ ಯೋಜನೆಯ ಕುರಿತು ಸುತ್ತಮುತ್ತಲಿನ ರೈತರಿಗೆ ನೋಟಿಸ್ ಮುಖಾಂತರ ಮಾಹಿತಿ ನೀಡದೇ ಇದ್ದರೆ ಅದರ ನಕಲು ನೀಡುವಂತೆ, ಗ್ರಾಮಸ್ಥರ ಗಮನಕ್ಕೆ ತರಲು ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡಿದ್ದರೆ ಅದರ ಮಾಹಿತಿ ಕೊಡುವಂತೆ ಆಗ್ರಹಿಸಿದರು.
ರೈತರ ಜಮೀನುಗಳಲ್ಲಿ ಮಳೆ ನೀರು ಹರಿಯುವ ನಾಲಾದಲ್ಲಿ ನೀರು ತಡೆಗಟ್ಟಿ ವಾಹನ ಹೋಗಲು ರಸ್ತೆ ಮಾಡಲು ಯಾರಿಂದ ಅನುಮತಿ ಪಡೆಯಲಾಗಿದೆ? ಅದಕ್ಕೆ ಉತ್ತರಿಸಿ, ನಾಲಾ ನೀರು ತಡೆಗಟ್ಟಿ ರೈತರ ಜಮೀನು ನಾಶವಾಗಿ ಹಾಳಾಗಿದ್ದು, ಅದಕ್ಕೆ ಯಾರು ಹೊಣೆ ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ಸುತ್ತಮುತ್ತಲಿನ ರೈತರ ಜಮೀನು ನಾಶವಾಗಿರುವ ಕುರಿತು ಪೂರ್ತಿ ಪರಿಹಾರ ನೀಡುವಂತೆ ಒತ್ತಾಯಿಸಿದ ಅವರು, ಸರ್ವೆ ನಂಬರ್ 138 ಜಮೀನಿನಲ್ಲಿ ಅಪಾರ ಪ್ರಮಾಣದ ಎರೆ ಮಣ್ಣು ಕಿತ್ತುಹೋಗಿದೆ. ಆಯಾ ಜಾಗದಲ್ಲಿ ಜಮೀನು ನಷ್ಟವಾಗಿದೆ. ಮೂರು ಬಾರಿ ಬಿತ್ತನೆ ಮಾಡಿದ ಬೆಳೆ ನಾಶವಾಗಿದೆ. ಪದೇ ಪದೇ ಜಮೀನು ದುರಸ್ತಿ ಮಾಡುತ್ತಲೇ ಇದ್ದಾರೆ. ಕಾಮಗಾರಿ ಮಾಡುತ್ತಿರುವವರು ಪದೇ ಪದೇ ಕೃಷಿ ಜಮೀನುಗಳನ್ನು ನಾಶಪಡಿಸುವ ಕಾರ್ಯವನ್ನು ಮಾಡಿರುವುದರಿಂದ ಜಮೀನುಗಳು ನಾಶವಾಗಿವೆ. ಇದರಿಂದ ರೈತರಿಗೆ ಮಾನಸಿ ತೊಂದರೆ ಆಗಿದೆ. ಕೂಡಲೇ ಎಲ್ಲ ತರಹದ ಜಮೀನುಗಳು ನಾಶವಾಗಿರುವುದಕ್ಕೆ ಪೂರ್ಣ ಪ್ರಮಾಣದ ಪರಿಹಾರ ಕೊಡುವಂತೆ ಆಗ್ರಹಿಸಿದರು.
ಕಾಮಗಾರಿ ತಡೆಗಟ್ಟಿ ಕಾನೂನುಬದ್ಧವಾಗಿ ಸರ್ಕಾರದಿಂದ ಎಲ್ಲ ತರಹದ ಅನುಮತಿ ಪಡೆದು ಕಾಮಗಾರಿ ಕೈಗೊಳ್ಳುವಂತೆ, ನಿಯಮಾನುಸಾರವಾಗಿ ಸರ್ಕಾರ ಮಾಡಿರುವ ಕಾನೂನು ನಿಯಮಾವಳಿಗಳ ಪ್ರಕಾರವಾಗಿಯೂ ಜಮೀನು ಕಳೆದುಕೊಂಡ ಕುಟುಂಬಗಳಿಗೆ ಸಂಬಂಧಪಟ್ಟ ಇಲಾಖೆಯಲ್ಲಿ ಪೂರ್ಣ ಕಾಲಿಕ (ಖಾಯಂ) ನೌಕರಿ ಕೊಡುವಂತೆ, ಇಲಾಖೆಯ ಸಾಮಾನ್ಯ ಕಾಮಗಾರಿ ಏನೇ ಇದ್ದರೂ ರೈತರಿಗೆ ಕಾಮಗಾರಿ ಕೆಲಸ ಕೊಡುವಂತೆ, ಸ್ಥಳೀಯ ಕೂಲಿ ಕಾರ್ಮಿಕರಿಗೆ ಕೆಲಸ ಕೊಡುವಂಗತೆ, ಗುಂಡಾ ದಲ್ಲಾಳಿಗಳಿಗೆ ಶಾಮೀಲು ಮಾಡಿಕೊಳ್ಳದೇ ಇರುವಂತೆ, ಸುತ್ತಮುತ್ತ ರೈತರ ಜಮೀನಿನಲ್ಲಿ ಯಾವುದೇ ಟವರ್, ಕಂಬ, ತಂತಿಗಳು ಬರದಿರುವಂತೆ ನೋಡಿಕೊಳ್ಳುವಂತೆ, ರೈತರ ಕೃಷಿ ಜಮೀನುಗಳಿಗೆ ಯಾವುದೇ ತರಹದ ತೊಂದರೆ ಮತ್ತು ನಷ್ಟವಾಗದಂತೆ ಕ್ರಮ ಕೈಗೊಳ್ಳುವಂತೆ ಅವರು ಒತ್ತಾಯಿಸಿದರು.
1600 ಎಕರೆ ಸ್ವಾಧೀನ ಪಡೆದಿರುವ ಜಮೀನನ್ನು ಬಿಟ್ಟು ರೈತರ ಕೃಷಿ ಜಮೀನುಗಳಿಗೆ ಹೊಂದಿಕೊಂಡು ಸಬ್ ಸ್ಟೇಷನ್ ಮಾಡುವ ಕಾರಣ ತಿಳಿಸಿಕೊಡುವಂತೆ, ಲೋಪದೋಷ ಇಟ್ಟುಕೊಂಡು ಉದ್ದೇಶಪೂರ್ವಕವಾಗಿ ಕಾಮಗಾರಿ ನಡೆಸಿದ್ದು, ಅನ್ಯಾಯವನ್ನು ತಡೆಯುವಂತೆ ಅವರು ಆಗ್ರಹಿಸಿದರು.