
ವೆನಿಸ್ (ಇಟಲಿ), ಫೆ.೨೭- ವಲಸಿಗರನ್ನು ಹೊತ್ತು ಸಾಗುತ್ತಿದ್ದ ಹಡಗು ಪ್ರತಿಕೂಲ ವಾತಾವರಣದಿಂದ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ೧೨ ಮಕ್ಕಳು ಸೇರಿದಂತೆ ೬೦ ಮಂದಿ ಮೃತಪಟ್ಟು, ಹಲವರು ನಾಪತ್ತೆಯಾದ ಘಟನೆ ದಕ್ಷಿಣ ಇಟಲಿಯ ತೀರ ಪ್ರದೇಶದಲ್ಲಿ ನಡೆದಿದೆ.
ಹಲವು ದಿನಗಳ ಹಿಂದೆ ಟರ್ಕಿಯಿಂದ ಹೊರಟಿದ್ದ ಹಡಗಿನಲ್ಲಿ ಅಫ್ಘಾನಿಸ್ತಾನ, ಪಾಕಿಸ್ತಾನ, ಸೊಮಾಲಿಯಾ ಮತ್ತು ಇರಾನ್‌ನ ಪ್ರಯಾಣಿಕರಿದ್ದರು. ಕ್ಯಾಲಬ್ರಿಯಾ ಪ್ರದೇಶದ ಕರಾವಳಿ ಪಟ್ಟಣವಾಗಿರುವ ಕ್ರೋಟೋನ್ ಬಳಿ ಡಾಕ್ (ನಿಲುಗಡೆ) ಮಾಡಲು ಪ್ರಯತ್ನಿಸುತ್ತಿರುವಾಗ ಹಡಗು ಒಡೆದುಹೋಗಿದೆ ಎನ್ನಲಾಗಿದೆ. ಹಡಗಿನಲ್ಲಿ ಕನಿಷ್ಠ ೧೫೦ ಮಂದಿ ಪ್ರಯಾಣಿಸುತ್ತಿದ್ದರು ಎಂದು ದುರ್ಘಟನೆಯಲ್ಲಿ ಬದುಕುಳಿದಿರುವ ಸಂತ್ರಸ್ತರು ತಿಳಿಸಿದ್ದಾರೆ. ಆದರೆ ಈ ಬಗ್ಗೆ ನಿಖರ ಸಂಖ್ಯೆ ಇನ್ನೂ ಬಹಿರಂಗವಾಗಿಲ್ಲ. ಕೆಲವೊಂದು ಮೂಲಗಳ ಪ್ರಕಾರ ೨೦೦ಕ್ಕೂ ಹೆಚ್ಚು ಮಂದಿ ಹಡಗಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಆದರೆ ೬೦ ಮಂದಿ ಪ್ರಯಾಣಿಕರ ಸಾಮರ್ಥ್ಯದ ಹಡಗಿನಲ್ಲಿ ೨೦೦ಕ್ಕೂ ಹೆಚ್ಚು ಮಂದಿ ಪ್ರಯಾಣಿಸಿರುವುದು ದುರಂತಕ್ಕೆ ಕಾರಣವಾಗಿರಬಹುದು ಎಂಬ ಮಾತು ಸದ್ಯ ಕೇಳಿಬರುತ್ತಿದೆ. ಇನ್ನು ಘಟನಾ ಸ್ಥಳಕ್ಕೆ ಇಟಲಿಯ ಆಂತರಿಕ ಸಚಿವ ಮ್ಯಾಟಿಯೊ ಪಿಯಾಂಟೆಡೊಸಿ ಭೇಟಿ ನೀಡಿದ್ದು, ೩೦ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೆ ದುರ್ಘಟನೆಯಲ್ಲಿ ಕೆಲವೇ ತಿಂಗಳಿನ ಮಗುವೊಂದು ಕೂಡ ಮೃತಪಟ್ಟಿದ್ದ ಎನ್ನಲಾಗಿದೆ. ಅವಘಡದ ಬಳಿಕ ಮೃತಪಟ್ಟವರ ದೇಹಗಳನ್ನು ಕಡಲತೀರದ ರೆಸಾರ್ಟ್ ಬಳಿಯಿಂದ ಪತ್ತೆಹಚ್ಚಲಾಗಿದೆ. ಹಡಗು ಮುಳುಗಿದ ಬಳಿಕ ದಡ ತಲುಪುವಲ್ಲಿ ಯಶಸ್ವಿಯಾದ ಕೆಲವರು ಸೇರಿದಂತೆ ೮೦ ಜನರು ಜೀವಂತವಾಗಿ ಪತ್ತೆ ಯಾಗಿದ್ದಾರೆ ಎಂದು ಕರಾವಳಿ ರಕ್ಷಣಾ ಪಡೆ ತಿಳಿಸಿದೆ. ಇನ್ನು ಸದ್ಯ ದುರಂತದಲ್ಲಿ ಬದುಕುಳಿದವರಿಗೆ ರೆಡ್‌ಕ್ರಾಸ್ ಸಿಬ್ಬಂದಿ ಕಂಬಳಿಗಳನ್ನು ನೀಡಲಾಗಿದ್ದು, ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬದುಕುಳಿದ ಓರ್ವ ಸಂತ್ರಸ್ತನನ್ನು ವಲಸೆ ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ಕಸ್ಟಮ್ಸ್ ಪೊಲೀಸರು ತಿಳಿಸಿದ್ದಾರೆ.