ಸಂಜೆವಾಣಿ ವಾರ್ತೆ
ಕೊಟ್ಟೂರು, ಜೂ.20: ತಾಲೂಕಿನ ನಿಂಬಳಗೆರೆ ಗ್ರಾಮದಲ್ಲಿ ಗ್ರಾಮಸ್ಥರು ಹಾಗೂ ಮಹಿಳೆಯರು ಸೇರಿ ಬುಡ್ಡೆಕಲ್ಲಿಗೆ ನೀರು ಹಾಕಿ ಮಳೆಗಾಗಿ ಪ್ರಾರ್ಥಿಸಿದರು.
ಗ್ರಾಮದ ಮುಖಂಡರ ಸಮ್ಮುಖದಲ್ಲಿ ಯುವಕ, ಯುವತಿಯರು ಸೇರಿ ಊರ ಮುಂದಿನ ಬುಡ್ಡೆಕಲ್ಲಿಗೆ ನೂರ ಒಂದು ಕೊಡ ನೀರು ಸುರಿದು ಬಾರಯ್ಯ ಮಳೆ ರಾಯ ಎಂದು ಪ್ರಾರ್ಥಿಸುತ್ತ ಬುಡ್ಡೆಕಲ್ಲಿಗೆ ಸಂಪ್ರಾದಾಯಿಕವಾಗಿ ಪೂಜೆ ಸಲ್ಲಿಸಿದರು.
ಇತ್ತೀಚೆಗೆ ಬಂದಿದ್ದ ಅಲ್ಪ ಸ್ವಲ್ಪ ಮಳೆಗೆ ಅನೇಕ ರೈತರು ಜೋಳ, ಮೆಕ್ಕೆಜೋಳ ಸೇರಿದಂತೆ ವಿವಿಧ ಬೆಳೆಗಳ ಬೀಜಗಳನ್ನು ಬಿತ್ತಲಾಗಿತ್ತು. ಆದರೆ ಕಳೆದ ಒಂದು ವಾರದಿಂದ ಮಳೆ ಕಾಣೆಯಾಗಿದ್ದು, ಬಿಸಿಲಿನ ಬೇಗೆ ಹೆಚ್ಚಾಗಿದ್ದು. ಇದರಿಂದ ಬಿತ್ತನೆ ಮಾಡಿದ್ದ ಬೆಳೆಗಳು ಬಾಡಲಾರಂಭಿಸಿವೆ. ಇದರಿಂದ ಗ್ರಾಮದ ಎಲ್ಲಾ ಜನರು ಸೇರಿ ಬುಡ್ಡೆಕಲ್ಲಿಗೆ ನೀರು ಹಾಕಿ ಮಳೆ ಸುರಿಯಲಿ ಎಂದು ಪ್ರಾರ್ಥನೆ ಸಲ್ಲಿಸಿದರು.