ಕಲ್ಲಬೆಟ್ಟು ನ್ಯಾಯಬೆಲೆ ಅಂಗಡಿಗೆ ಕಳಪೆ ಗೋಧಿ ಪೂರೈಕೆ ಪರಿಶೀಲನೆ ನಡೆಸಿ ಹಿಂದೆ ಕಳುಹಿಸಿದ ತಹಸೀಲ್ದಾರ್

ಮೂಡುಬಿದಿರೆ, ಮಾ.೨೫- ಇಲ್ಲಿನ ಕಲ್ಲಬೆಟ್ಟು ಸೇವಾ ಸಹಕಾರಿ ಸಂಘದ ಅಧೀನದಲ್ಲಿರುವ ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರದಿಂದ ಕಳಪೆ ಗುಣಮಟ್ಟದ ಗೋಧಿ ಪೂರೈಕೆಯಾಗಿರುವ ಬಗ್ಗೆ ದೂರಿನ ಹಿನ್ನಲೆಯಲ್ಲಿ ಬುಧವಾರ ಮೂಡುಬಿದಿರೆ ತಹಸೀಲ್ದಾರ್ ಪುಟ್ಟರಾಜು ಅವರು ಕಲ್ಲಬೆಟ್ಟುವಿನಲ್ಲಿರುವ ಸಂಘದ ಪ್ರಧಾನ ಶಾಖೆಯಲ್ಲಿರುವ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಪರಿಶೀಲಿಸಿ ಹಿಂದೆ ಕಳುಹಿಸಲು ವ್ಯವಸ್ಥೆ ಮಾಡಿದ ಘಟನೆ ನಡೆದಿದೆ.
ಕಲ್ಲಬೆಟ್ಟು ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಕಲ್ಲಬೆಟ್ಟು, ಕರಿಂಜೆ, ಶಿರ್ತಾಡಿ, ಪಡುಕೊಣಾಜೆ, ಮೂಡುಕೊಣಾಜೆ ಗ್ರಾಮಗಳ ೧೭೦೦ ಗ್ರಾಹಕರಿದ್ದು, ಈ ಬಾರಿ ೨ ಕ್ವಿಂಟಲ್‌ನಷ್ಟು ಕಳಪೆ ಗೋಧಿ ಪೂರೈಕೆಯಾಗಿದೆ ಎಂದು ಸಹಕಾರಿ ಉಪಾಧ್ಯಕ್ಷ ಆಲ್ವಿನ್ ಮೆನೇಜಸ್ ತಹಸೀಲ್ದಾರ್ ಗಮನಕ್ಕೆ ತಂದರು.
ಮಾಧ್ಯಮದವರ ಜೊತೆ ಮಾತನಾಡಿದ ತಹಸೀಲ್ದಾರ್, ಕಳಪೆ ಗುಣಮಟ್ಟದ ಗೋಧಿ ಪೂರೈಕೆಯಾಗಿರುವುದು ನಿಜ. ಇದನ್ನು ಹಿಂದೆ ಕಳುಹಿಸಿ, ಗುಣಮಟ್ಟದ ಗೋಧಿ ಪೂರೈಕೆಗಾಗಿ ವ್ಯವಸ್ಥೆ ಮಾಡುತ್ತೇವೆ ಎಂದು ತಿಳಿಸಿದರು.
ಸಹಕಾರಿಯ ನಿರ್ದೇಶಕ ಸುರೇಶ್ ಕೋಟ್ಯಾನ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಿತಾ ಶೆಟ್ಟಿ ಉಪಸ್ಥಿತರಿದ್ದರು.