ಕಲ್ಲಡ್ಕ ಭಟ್‌ ಕೂದಲು ಅಲ್ಲಾಡಿಸಲು ರೈಗೆ ಆಗಲಿಲ್ಲ: ಹರಿಕೃಷ್ಣ ಬಂಟ್ವಾಳ್‌

ಮಂಗಳೂರು, ನ.1೫- ರಮಾನಾಥ ರೈ ಸಚಿವರಾಗಿದ್ದ ವೇಳೆ ಕಲ್ಲಡ್ಕ ಪ್ರಭಾಕರ್‌ ಭಟ್‌ರನ್ನು ಬಂಧಿಸಲು ಸೂಚಿಸಿದ್ದರು. ಆದರೆ ಭಟ್‌ ಅವರ ಕೂದಲು ಅಲ್ಲಾಡಿಸಲು ರೈಗೆ ಆಗಲಿಲ್ಲ ಎಂದು ಕಿಯೋನಿಸ್ಕ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ತಿಳಿಸಿದ್ದಾರೆ.  

ಶನಿವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಂಟ್ವಾಳ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ರಮಾನಾಥ ರೈ ಎಸ್‌ಡಿಪಿಐ ಜೊತೆ ಮೈತ್ರಿ ಮಾಡಿಕೊಂಡಿರುವ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಕೊಲೆ ಆರೋಪಿಗಳಿಗೆ ರೈ ಬೆಂಬಲ ನೀಡಿದ್ದೇನೆ ಎಂದಿದ್ದೇನೆಯೇ ವಿನಃ ಎಲ್ಲೂ ಕೂಡ ರೈ ಕೊಲೆಗಾರ ಎಂದು ಹೇಳಲಿಲ್ಲ. ಆದರೆ ಅವರ ಹಿಂಬಾಲಕರು ರೈಯನ್ನು ಕೊಲೆಗಾರ ಎಂದು ಹೇಳಿಕೊಂಡು ನನ್ನ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಾಧ್ಯವಾದರೆ ಅವರು ನನ್ನನ್ನು ಬಂಧಿಸುವ ತಾಕತ್ತು ತೋರಿಸಲಿ ಎಂದು ಸವಾಲು ಹಾಕಿದ್ದಾರೆ. ಈ ಹಿಂದೆ ಅವರೇ ಸಚಿವರಾಗಿದ್ದಾಗ ಕಲ್ಲಡ್ಕ ಪ್ರಭಾಕರ್ ಭಟ್‌ರನ್ನು ಬಂಧಿಸಲು ಸೂಚಿಸಿದ್ದರು. ಆದರೆ, ಅವರ ಕೂದಲು ಅಲ್ಲಾಡಿಸಲು ರೈಗೆ ಆಗಲಿಲ್ಲ. ಇನ್ನು ನನ್ನನ್ನು ಬಂಧಿಸಲು ಸಾಧ್ಯವೇ. ನಾನು ಪಕ್ಷಾಂತರಿ ಎನ್ನುತ್ತಾರೆ. ಆದರೆ ರಮಾನಾಥ ರೈ ನೈಜ ಕಾಂಗ್ರೆಸಿಗನೇ? ನೇಗಿಲು ಹೊತ್ತ ರೈತ ಚಿಹ್ನೆಯನ್ನು ಅವರು ಹಿಡಿದು ಮೆರೆದಿದ್ದನ್ನು ಮರೆತಿದ್ದಾರೆಯೇ ಎಂದು ಹರಿಕೃಷ್ಣ ಬಂಟ್ವಾಳ್ ಪ್ರಶ್ನಿಸಿದರು. ರೈ ಗಂಡಭೇರುಂಡ ಪಕ್ಷಿಯಂತೆ. ಮುಂದಿನ ಚುನಾವಣೆಯಲ್ಲಿ ರೈಗೆ ಟಿಕೆಟ್ ನೀಡಿದರೆ ಕಾಂಗ್ರೆಸ್ ನೆಲಕಚ್ಚಲಿದೆ. ಬಿಜೆಪಿ ಮತ್ತು ಎಸ್‌ಡಿಪಿಐ ಮಧ್ಯೆಯೇ ಹಣಾಹಣಿ ನಡೆಯಲಿದೆ ಎಂದ ಹರಿಕೃಷ್ಣ ಬಂಟ್ವಾಳ್, ರೈಯನ್ನು ಪೂಜಾರಿ ಕಾಂಗ್ರೆಸ್‌ಗೆ ಸೇರ್ಪಡೆಗೊಳಿಸಿದಾಗ ವೀರಪ್ಪ ಮೊಯ್ಲಿಯವರು ರೈಯನ್ನು ಯಾಕೆ ಪಕ್ಷಕ್ಕೆ ಸೇರಿಸಿದ್ದರು ಎಂದು ಪ್ರಶ್ನಿಸಿರುವುದು ಗುಟ್ಟಾಗಿ ಉಳಿದಿಲ್ಲ ಎಂದರು. ನಾನು ಕಾಂಗ್ರೆಸ್ ಬಿಟ್ಟೊಡನೆ ನನ್ನ ಮತ್ತು ಕುಟುಂಬದ ವಿರುದ್ಧ ಅನಾಮಧೇಯ ಪತ್ರ ಬಂದಿರುವುದರ ಹಿಂದೆ ರೈಯ ಕೈವಾಡವಿದೆ ಎಂದು ಆಪಾದಿಸಿದ ಹರಿಕೃಷ್ಣ ಬಂಟ್ವಾಳ್, ನನ್ನನ್ನು ಬಂಧಿಸಲು ಹೆಣಗಾಡುವ ರೈ ಈ ಹಿಂದೆ ಪ್ರಧಾನಿ ಮೋದಿಯ ತಾಯಿ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್‌ರ ತಾಯಿ ಒಂದೇ ಎಂದಿರುವುದಕ್ಕಾಗಿ ಪ್ರಕರಣ ದಾಖಲಿಸಿ ಬಂಧಿಸಬೇಕಾಗಬಹುದು ಎಂದು ಎಚ್ಚರಿಸಿದರು. ರೈಯ ಮುಖ ಮಾತ್ರ ಇಂಡಿಯಾದ್ದು, ದೇಹ ಪಾಕಿಸ್ತಾನದ್ದಾಗಿದೆ ಎಂದು ವ್ಯಂಗ್ಯವಾಡಿದರು. ರೈ ಯಾವೊಬ್ಬ ಬಂಟ ನಾಯಕನನ್ನು ಕಾಂಗ್ರೆಸ್‌ನಲ್ಲಿ ಬೆಳೆಯಲು ಬಿಡಲಿಲ್ಲ. ಶಕುಂತಳಾ ಶೆಟ್ಟಿ, ವಿಜಯಕುಮಾರ್ ಶೆಟ್ಟಿ, ಕಳ್ಳಿಗೆ ತಾರಾನಾಥ ಶೆಟ್ಟಿ, ಅಶ್ವಿನ್ ಕುಮಾರ್ ರೈ, ಸದಾನಂದ ಪೂಂಜಾ, ಸದಾನಂದ ಮಲ್ಲಿ, ರಾಕೇಶ್ ಮಲ್ಲಿ ಅವರನ್ನು ಹತ್ತಿಕ್ಕಿರುವುದು ಎಲ್ಲರಿಗೂ ತಿಳಿದ ವಿಚಾರ ಎಂದರು. ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಕಸ್ತೂರಿ ಪಂಜ, ಸುಧೀರ್ ಶೆಟ್ಟಿ ಕಣ್ಣೂರು, ಜಗದೀಶ್ ಶೇಣವ, ರಾಧಾಕೃಷ್ಣ, ದೇವಪ್ಪ ಪೂಜಾರಿ ಉಪಸ್ಥಿತರಿದ್ದರು.