ಕಲ್ಲಕುರಿಚಿ ಹಿಂಸಾಚಾರ ವ್ಯಾಪಕ ಬಿಗಿಭದ್ರತೆ

ಕಲ್ಲಕುರಿಚಿ,ಜು, ೧೮ – ದ್ವಿತೀಯ ಪಿಯುಸಿ ವಿದ್ಯಾರ್ಥಿಯ ಆತ್ಮಹತ್ಯೆ ಮಾಡಿಕೊಂಡ ನಂತರ ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯ ಶಾಲೆಯಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ವ್ಯಾಪಕ ಪೊಲೀಸ್ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ವಿದ್ಯಾರ್ಥಿಯ ಸಾವಿಗೆ ನ್ಯಾಯಕ್ಕಾಗಿ ಒತ್ತಾಯಿಸಿ ಪ್ರತಿಭಟನಾಕಾರರು ಬಸ್‌ಗಳು ಮತ್ತು ಶಾಲಾ ಆಸ್ತಿಗಳಿಗೆ ಬೆಂಕಿ ಹಚ್ಚಿದ್ದರಿಂದ ಕಲ್ಲಕುರಿಚಿಯಲ್ಲಿ ಹಿಂಸಾಚಾರ ಉಗ್ರ ಸ್ವರೂಪ ಪಡೆದಿದೆ.ಈ ಸಂಬಂಧ ಮೂರು ಮಂದಿಯನ್ನು ಬಂಧಿಸಲಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಸಿ ಸೈಲೇಂದ್ರ ಬಾಬು, ವಿದ್ಯಾರ್ಥಿಯ ಸಾವು ಮತ್ತು ಶಾಲಾ ಹಾಸ್ಟೆಲ್‌ನಲ್ಲಿ ಸುರಕ್ಷತೆ ಕಾಪಾಡಿಕೊಳ್ಳಲು ವಿಫಲವಾದ ಪ್ರಕರಣದಲ್ಲಿ ಶಾಲೆಯ ರವಿಕುಮಾರ್, ಕಾರ್ಯದರ್ಶಿ ಶಾಂತಿ ಮತ್ತು ಪ್ರಾಂಶುಪಾಲ ಶಿವಶಂಕರನ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

೧೭ ವರ್ಷದ ಬಾಲಕಿಯ ಸಾವು ಮತ್ತು ಶಾಲಾ ಹಾಸ್ಟೆಲ್‌ನಲ್ಲಿ ಸುರಕ್ಷತೆ ಕಾಪಾಡಿಕೊಳ್ಳಲು ವಿಫಲವಾದ ಪ್ರಕರಣವನ್ನು ರಿಮ್ ಇನ್ವೆಸ್ಟಿಗೇಶನ್ ಡಿಪಾರ್ಟ್ಮೆಂಟ್ ಗೆ ವರ್ಗಾಯಿಸಲಾಗಿದೆ, ಎಂದು ಹೇಳಿದ್ದಾರೆ

ರಾಜ್ಯ ಗೃಹ ಕಾರ್ಯದರ್ಶಿ ಫಣೀಂದ್ರ ರೆಡ್ಡಿ ಅವರು, ಪ್ರಕರಣದ ತನಿಖೆ ಎಲ್ಲಾ ಕೋನಗಳಿಂದ ನಡೆಸಲಾಗುವುದು ಮತ್ತು ಸಾರ್ವಜನಿಕರು ಹಿಂಸಾಚಾರದಲ್ಲಿ ಪಾಲ್ಗೊಳ್ಳದಂತೆ ವಿನಂತಿಸಿದ್ದಾರೆ.

“ಈ ಪ್ರಕರಣದ ಎಲ್ಲಾ ಅನುಮಾನ ನಿವಾರಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ಪ್ರಕರಣದಲ್ಲಿ ಎಲ್ಲಾ ಕೋನಗಳಿಂದ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡುತ್ತೇವೆ. ಹಿಂಸಾಚಾರದ ಕೃತ್ಯಗಳಲ್ಲಿ ಪಾಲ್ಗೊಳ್ಳದಂತೆ ಮತ್ತು ವದಂತಿಗಳಿಗೆ ಕಿವಿಗೊಡದಂತೆ ನಾವು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇವೆ” ಎಂದು ಹೇಳಿದ್ದಾರೆ.

ಶಾಂತಿ ಕಾಪಾಡಲು ಸಿಎಂ ಮನವಿ

ಶಾಂತಿ ಕಾಪಾಡುವಂತೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಟ್ವೀಟ್ ಮಾಡಿ, ಮನವಿ ಮಾಡಿದ್ದಾರೆ.

“ಹಿಂಸಾಚಾರ ನನಗೆ ಆತಂಕ ತಂದಿದೆ. ಶಾಲಾ ಬಾಲಕಿಯ ಸಾವಿನ ಪ್ರಕರಣದ ಪೊಲೀಸ್ ತನಿಖೆ ಪೂರ್ಣವಾದ ಬಳಿಕ ಆರೋಪಿಗಳಿಗೆ ಶಿಕ್ಷೆಯಾಗಲಿದೆ. ಡಿಜಿಪಿ, ಗೃಹ ಕಾರ್ಯದರ್ಶಿ ಕಲ್ಲಾಕುರಿಚಿಗೆ ತೆರಳುವಂತೆ ಸೂಚಿಸಿದ್ದೇನೆ ಜನರು ಶಾಂತಿ ಕಾಪಾಡುವಂತೆ ವಿನಂತಿಸಿದ್ದಾರೆ.

ಪೊಲೀಸ್ ಅಧಿಕಾರಿಗಳ ಪ್ರಕಾರ, “ಮೃತ ಬಾಲಕಿ ರಾತ್ರಿ ಶಾಲೆಯ ಆವರಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಮತ್ತು ಶಾಲೆಯ ಇಬ್ಬರು ಶಿಕ್ಷಕರು ನಿರಂತರವಾಗಿ ಓದುವಂತೆ ಒತ್ತಾಯಿಸಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಹೇಳಲಾದ ಟಿಪ್ಪಣಿ ಪತ್ತೆಯಾಗಿದೆ ಎನ್ನಲಾಗಿದೆ.