ಕಲ್ಯಾಣ ರಾಜ್ಯದ ಕನಸುಗಾರ ಬಸವಣ್ಣ : ಡಾ.ವನದುರ್ಗ

ಜೇವರ್ಗಿ :ಮಾ.15: ಮಹಾತ್ಮ ಗಾಂಧೀಜಿ ರಾಮರಾಜ್ಯ, ಡಾ.ಬಿ.ಆರ್.ಅಂಬೇಡ್ಕರ್ ಸಮತಾ ಸಮಾಜ, ಪ್ರೋ.ನಂಜುಂಡಸ್ವಾಮಿ ರೈತ ಸಮಾಜ ನಿರ್ಮಾಣ ಮಾಡುವ ಕನಸು ಕಂಡಿದ್ದರು, ಆದರೆ ವಿಶ್ವಗುರು ಅಣ್ಣ ಬಸವಣ್ಣ ಕಲ್ಯಾಣ ರಾಜ್ಯ ನಿರ್ಮಾಣ ಮಾಡುವ ಕನಸು ಕಂಡಿದ್ದ ಮಹಾನ್ ವ್ಯಕ್ತಿತ್ವ ಅವರದ್ದಾಗಿತ್ತು ಎಂದು ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯ ಪ್ರೋ.ರಂಗರಾಜ ವನದುರ್ಗ ಹೇಳಿದರು.

 ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ರವಿವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ 5 ನೇ ತಾಲೂಕು ಶರಣ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ದಾನ ಬದಲು ದಾಸೋಹ, ಕರ್ಮ ಬದಲು ಕಾಯಕ ತತ್ವ ನೀಡಿದ ಶರಣ ಸಾಹಿತ್ಯದ ಕೊಡುಗೆ ಅಪಾರವಾಗಿದೆ. ಜಾತಿ, ಮತ, ಪಂಥ ಭೇದ ಮರೆತು ರಚನೆಯಾದ ವಚನ ಸಾಹಿತ್ಯ ನಾಡಿನ ನಡೆಗೆ ಮಾರ್ಗ ದರ್ಶನವಾಗಬೇಕು. 12ನೇ ಶತಮಾನದ ಶರಣರ ಚಿಂತನೆ ಅರ್ಥಪೂರ್ಣ. ವಚನಕಾರರು ನುಡಿದಂತೆ ಬದುಕಿದವರು. ಅವರ ಸಂದೇಶ ಸಮಾಜದ ಪ್ರಗತಿಗೆ ಎಂದಿಗೂ ಪ್ರಸ್ತುತ. ಶರಣ ಸಾಹಿತ್ಯ ಸಮ್ಮೇಳನವು ಮುಂದಿನ ಪೀಳಿಗೆಗೆ ದಾರಿದೀಪವಾಗಲಿದೆ. 12ನೇ ಶತಮಾನದ ಸಂಭ್ರಮ ನೆನಪಿಸಿಕೊಳ್ಳುವಂತ ಸುದಿನ ಇದಾಗಿದ್ದು, ಇಂತಹ ಕಾರ್ಯಕ್ರಮಗಳಲ್ಲಿ ಯುವ ಜನಾಂಗ ಹೆಚ್ಚಾಗಿ ಭಾಗವಹಿಸಬೇಕು ಎಂದು ಹೇಳಿದರು.

 ಸಮ್ಮೇಳನಾಧ್ಯಕ್ಷ ಶರಣಗೌಡ ಪಾಟೀಲ ಜೈನಾಪೂರ ಮಾತನಾಡಿ, ಕೃಷ್ಣ-ಭೀಮೆಯರ ಮಧ್ಯದಲ್ಲಿ ಕಂಗೊಳಿಸುವ ಸಗರನಾಡಿನ ಹೆಬ್ಬಾಗಿಲು ಜೇವರ್ಗಿ ಅನೇಕ ಶರಣ, ಸಂತ, ಸೂಫಿ, ತತ್ವಪದಕಾರರ ನಾಡು. ಕಲೆ, ಸಾಹಿತ್ಯ, ಸಂಗೀತ, ಜಾನಪದ, ಶಿಲ್ಪಕಲೆಗೆ ಹೆಸರುವಾಸಿಯಾಗಿದೆ. ಕಲ್ಯಾಣದಲ್ಲಿ ನಡೆದ ಕ್ರಾಂತಿಯ ನಂತರ ಅನೇಕ ಶರಣರು ಈ ಪ್ರದೇಶದಲ್ಲಿ ತಮ್ಮ ಹಿರಿಮೆಯನ್ನು ಮೆರೆದಿದ್ದಾರೆ. ಹತ್ತಾರು ಶರಣರು ವಚನ, ತತ್ವಪದಗಳನ್ನು ರಚಿಸುವ ಮೂಲಕ ಜೇವರ್ಗಿಯನ್ನು ಎರಡನೇ ಕಲ್ಯಾಣವನ್ನಾಗಿಸಿದ್ದಾರೆ. ಇಂತಹ ಪವಿತ್ರ ಭೂಮಿಯಲ್ಲಿ ಸಮ್ಮೇಳನ ನಡೆಯುತ್ತಿರುವುದು ಸಮಂಜಸವು, ಸ್ವಾಗತಾರ್ಹವೂ ಎನಿಸುತ್ತದೆ ಎಂದರು.

 ಪರಿಷತ್ ಜಿಲ್ಲಾಧ್ಯಕ್ಷ ಕುಪೇಂದ್ರ ಪಾಟೀಲ ಅಧ್ಯಕ್ಷತೆ, ಬಸವಕಲ್ಯಾಣದ ನಿರಂಜನ ಸ್ವಾಮೀಜಿ, ರಾವೂರಿನ ಸಿದ್ಧಲಿಂಗ ದೇವರು, ಸಾನಿಧ್ಯ ವಹಿಸಿದ್ದರು. ಕೇಂದ್ರೀಯ ವಿವಿಯ ಡಾ.ಬಸವರಾಜ ಡೋಣೂರ ಪುಸ್ತಕ ಬಿಡುಗಡೆ ಮಾಡಿದರು. ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಡಿ.ಬಿ.ಪಾಟೀಲ, ಪರಿಷತ್ ತಾಲೂಕು ಅಧ್ಯಕ್ಷ ಎಸ್.ಕೆ.ಬಿರಾದಾರ, ಆಹಾರ ಇಲಾಖೆಯ ಉಪನಿರ್ದೇಶಕ ದಯಾನಂದ ಪಾಟೀಲ, ಹಿರಿಯ ಸಾಹಿತಿ ಶ್ರೀಶೈಲ ನಾಗರಾಳ, ಉದ್ಯಮಿಗಳಾದ ಸೋಮಶೇಖರ ಪಾಟೀಲ ಗುಡೂರ, ಚನ್ನಮಲ್ಲಯ್ಯ ಹಿರೇಮಠ, ಸುಧೀಂದ್ರ ವಕೀಲ, ಗುಡುಲಾಲ ಶೇಖ, ಮಹಿಬೂಬಪಟೇಲ ಕೋಬಾಳ, ಸಂಗಯ್ಯ ಗುತ್ತೇದಾರ ಭಾಗವಹಿಸಿದ್ದರು.

ಇದಕ್ಕೂ ಮುನ್ನ ಬೆಳಿಗ್ಗೆ 8:00 ಗಂಟೆಗೆ ಸ್ವಾತಂತ್ರ್ಯ ಹೋರಾಟಗಾರ ಶಿವಶಂಕ್ರಪ್ಪ ಕವಲಗಾ ರಾಷ್ಟ್ರಧ್ವಜಾರೋಹಣ, ಜಿಪಂ ಮಾಜಿ ಸದಸ್ಯ ಅಶೋಕ ಸಾಹು ಗೋಗಿ ಪರಿಷತ್ ಧ್ವಜಾರೋಹಣ ನೆರವೇರಿಸಿದರು.

ಮಧ್ಯಾಹ್ನ 12:00 ಗಂಟೆಗೆ ತಾಲೂಕಿನ ವಿವಿಧ ಕಲಾವಿದರಿಂದ ವಚನಗಾಯನ, 12:30 ಕ್ಕೆ ನಡೆದ ಪ್ರಥಮ ಗೋಷ್ಠಿಯಲ್ಲಿ ರಂಗಕರ್ಮಿ ಎಲ್.ಬಿ.ಕೆ.ಆಲ್ದಾಳ ಅಧ್ಯಕ್ಷತೆ, ಜೇರಟಗಿ ಮಹಾಂತ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ರಮೇಶಬಾಬು ಯಾಳಗಿ ಉಪನ್ಯಾಸ ನೀಡಿದರು.

 ಗೋಷ್ಠಿ-2 ರಲ್ಲಿ ಪ್ರೋ.ಬಿ.ಬಿ.ಪೂಜಾರ ಅಧ್ಯಕ್ಷತೆ, ಯಡ್ರಾಮಿಯ ಸಿದ್ಧಲಿಂಗ ದೇವರು ಸಾನಿಧ್ಯ ವಹಿಸಿದ್ದರು. ರಾಜಣ್ಣ ತಗ್ಗಿ, ಡಾ.ವಿಜಯಕುಮಾರ ಎಚ್ ಉಪನ್ಯಾಸ ನೀಡಿದರು. ಗೋಷ್ಠಿ-3 ರಲ್ಲಿ ಸೊನ್ನದ ಡಾ.ಶಿವಾನಂದ ಸ್ವಾಮೀಜಿ ಸಾನಿಧ್ಯ, ಬಿ.ವಿ.ವಸಂತಕುಮಾರ ಅಧ್ಯಕ್ಷತೆ ವಹಿಸಿದ್ದರು.

   ಈ ಸಂದರ್ಭದಲ್ಲಿ ಗುರುಲಿಂಗಯ್ಯಸ್ವಾಮಿ ಯನಗುಂಟಿ, ದೇವಿಂದ್ರ ಬಾಕಾ, ಗುಂಡು ಬಡಿಗೇರ, ಬಸವರಾಜ ತಿಳಗೂಳ, ಚಂದ್ರಶೇಖರ ಸೀರಿ, ಡಾ.ಪಿ.ಎಂ.ಮಠ, ಐ.ಎಸ್.ಹಿರೇಮಠ, ನಾಗಪ್ಪ ಸಜ್ಜನ್, ಎಸ್.ಎಸ್.ಮಾಲಿಬಿರಾದಾರ, ಎಸ್.ಟಿ.ಬಿರಾದಾರ, ಸಿದ್ದಣ್ಣ ಹಾಲಗಡ್ಲಾ, ಶ್ರೀಹರಿ ಕರಕಿಹಳ್ಳಿ, ಜಗದೀಶ ಪಡಶೆಟ್ಟಿ, ಮಲ್ಲಿಕಾರ್ಜುನ ಗುಳೇದ್, ವಿಶ್ವನಾಥ ಪಾಟೀಲ ಗೌನಳ್ಳಿ, ಈರಣ್ಣ ಭೂತಪೂರ, ಶರಣಗೌಡ ಪಾಳಾ, ತುಳಜಾರಾಮ ರಾಠೋಡ, ತುಕಾರಾಮ ರಾಠೋಡ, ಲಿಂಗರಾಜ ಮಾಸ್ಟರ್, ಬಸವರಾಜ ಬಾಗೇವಾಡಿ, ಮರೆಪ್ಪ ಸರಡಗಿ ಸೇರಿದಂತೆ ನೂರಾರು ಜನ ಬಸವಾಭಿಮಾನಿಗಳು ಭಾಗವಹಿಸಿದ್ದರು. ಬಸವರಾಜ ಬಂಟನೂರ ವಚನಗಾಯನ, ಕುಮಾರಿ ಸಮೃದ್ಧಿ ಗುಳೇದ್ ವಚನ ನೃತ್ಯ ಮಾಡಿದರು. ಪರಿಷತ್ ಅಧ್ಯಕ್ಷ ಎಸ್.ಕೆ.ಬಿರಾದಾರ ಸ್ವಾಗತಿಸಿದರು. ಕುಮಾರಿ ಸುನಂದಾ ಕಲ್ಲಾ ನಿರೂಪಿಸಿದರು. ಶಿಕ್ಷಕ ಮೌನಪ್ಪ ವಿಶ್ವಕರ್ಮ ವಂದಿಸಿದರು.